ಪ್ರೇಮ ಪ್ರಕರಣದ ಭಯ! ಮೂವರು ಯುವತಿಯರ ಆತ್ಮಹತ್ಯೆ ಯತ್ನ, ಒಬ್ಬರ ಸಾವು

Views: 77
ಕನ್ನಡ ಕರಾವಳಿ ಸುದ್ದಿ:ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಕ್ವಾರಿಯರದೊಡ್ಡಿ ಗ್ರಾಮದಲ್ಲಿ ಭಾನುವಾರ ನಡೆದ ದುರದೃಷ್ಟಕರ ಘಟನೆಯೊಂದು ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಒಂದೇ ಊರಿನ ಮೂವರು ಯುವತಿಯರು ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ತಿರುವು ದೊರೆತಿದೆ.
ರಾತ್ರಿ ಮನೆ ಸೇರಬೇಕಿದ್ದ ಈ ಯುವತಿಯರು ಸಾವಿನ ಅಂಚಿಗೆ ಹೋಗಲು ಪ್ರೇಮ ಪ್ರಕರಣಗಳೇ ಕಾರಣ ಎಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಭಾನುವಾರ ಕೃಷಿ ಕೆಲಸ ಮುಗಿಸಿ ಮನೆಗೆ ಹಿಂದಿರುಗಬೇಕಿದ್ದ 18 ವರ್ಷದ ರೇಣುಕಾ, ತಿಮ್ಮಕ್ಕ ಮತ್ತು ಮತ್ತೊಬ್ಬ ಅಪ್ರಾಪ್ತ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಮೂವರ ಪೈಕಿ ರೇಣುಕಾ ಮೃತಪಟ್ಟಿದ್ದಾಳೆ, ತಿಮ್ಮಕ್ಕ ಮತ್ತು ಅಪ್ರಾಪ್ತ ಯುವತಿ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರಂಭದಲ್ಲಿ ಈ ಘಟನೆ ನಿಗೂಢವಾಗಿದ್ದರೂ, ದೇವದುರ್ಗ ಪೊಲೀಸರು ನಡೆಸಿದ ತನಿಖೆಯಿಂದ ಇಡೀ ದುರಂತದ ಹಿಂದಿನ ಪ್ರೇಮ ಕಥೆಗಳು ಬೆಳಕಿಗೆ ಬಂದಿವೆ. ಈ ಪ್ರೇಮ ಪ್ರಕರಣಗಳೇ ಮೂವರು ಯುವತಿಯರ ಬಾಳಿಗೆ ಕಂಟಕವಾಗಿ, ಸಾಮೂಹಿಕ ಆತ್ಮಹತ್ಯೆ ಯತ್ನಕ್ಕೆ ಕಾರಣವಾಗಿವೆ.
ಮೃತ ರೇಣುಕಾ, ತಿಮ್ಮಕ್ಕ ಮತ್ತು ಅಪ್ರಾಪ್ತ ಯುವತಿ ಮೂವರೂ ಸಂಬಂಧಿಕರಾಗಿದ್ದು, ವಿಭಿನ್ನ ಯುವಕರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ಮಧ್ಯೆ, ರೇಣುಕಾಳಿಗೆ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಇನ್ನೊಂದು ವಾರದಲ್ಲಿ ನಿಶ್ಚಿತಾರ್ಥ ನಡೆಯಬೇಕಿದ್ದ ಕಾರಣ ರೇಣುಕಾ ಒಳಗೊಳಗೆ ತೀವ್ರ ಬೇಸರಗೊಂಡಿದ್ದಳು. ತಮ್ಮ ಪ್ರೇಮ ಪ್ರಕರಣಗಳು ಹಿರಿಯರಿಗೆ ತಿಳಿದರೆ ಕುಟುಂಬದಲ್ಲಿ ದೊಡ್ಡ ಸಮಸ್ಯೆ ಉಂಟಾಗಬಹುದು ಎಂಬ ಭಯ ಈ ಮೂವರನ್ನೂ ಕಾಡಿತ್ತು.
ದುರಂತ ನಡೆದ ಬಗೆ: ಪ್ರೇಮ ಪ್ರಕರಣಗಳು ಬಯಲಾಗುವ ಆತಂಕದಿಂದ ಕಳೆದ ವಾರವೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ ಇವರು, ಭಾನುವಾರ ತಿಮ್ಮಕ್ಕನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ತಮ್ಮ ನಿರ್ಧಾರವನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ತಿಮ್ಮಕ್ಕ ಮೊದಲು ಕ್ರಿಮಿನಾಶಕ ಸೇವಿಸಿದ್ದು, ನಂತರ ರೇಣುಕಾ ಮತ್ತು ಅಪ್ರಾಪ್ತ ಯುವತಿ ಕೂಡ ಅದೇ ಕ್ರಿಮಿನಾಶಕ ಸೇವಿಸಿದ್ದಾರೆ.
ಕ್ರಿಮಿನಾಶಕ ಸೇವಿಸಿದ ಕೂಡಲೇ ತಿಮ್ಮಕ್ಕ ಒದ್ದಾಡಲು ಶುರು ಮಾಡಿದ್ದಾಳೆ. ಆಕೆಯನ್ನು ಮೃತಪಟ್ಟಿದ್ದಾಳೆಂದು ಭಾವಿಸಿದ ರೇಣುಕಾ ಮತ್ತು ಅಪ್ರಾಪ್ತ ಯುವತಿ ಭಯಭೀತರಾಗಿ, ತಿಮ್ಮಕ್ಕನ ಹೊಲದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಸ್ಥಳೀಯರು ಧಾವಿಸಿ ಅಪ್ರಾಪ್ತ ಯುವತಿಯನ್ನು ಬದುಕಿಸಿದರೆ, ರೇಣುಕಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಳು.
ಮಗಳ ಸಾವಿನ ಕುರಿತು ರೇಣುಕಾಳ ಕುಟುಂಬಸ್ಥರು ತಿಮ್ಮಕ್ಕ ಮತ್ತು ಅಪ್ರಾಪ್ತ ಯುವತಿಯ ಮೇಲೆ ಅನುಮಾನ ವ್ಯಕ್ತಪಡಿಸಿ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ, ದೇವದುರ್ಗ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ. ವಿಷ ಸೇವಿಸಿದ್ದ ತಿಮ್ಮಕ್ಕಳಿಗೆ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಅಪ್ರಾಪ್ತ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ರೇಣುಕಾಳ ಕುಟುಂಬಸ್ಥರ ಆಕ್ರಂದನ ಇಡೀ ಗ್ರಾಮಕ್ಕೆ ಕಣ್ಣೀರು ತರಿಸಿದೆ.