ತುಂಗಭದ್ರಾ ನದಿ ಸೇತುವೆ ಮೇಲಿಂದ ಹಾರಿದ ಅಪ್ರಾಪ್ತ ಪ್ರೇಮಿಗಳು
Views: 51
ಕನ್ನಡ ಕರಾವಳಿ ಸುದ್ದಿ: ಪ್ರೀತಿಸುತ್ತಿದ್ದ ಅಪ್ರಾಪ್ತ ಜೋಡಿಯೊಂದು ಇಲ್ಲಿನ ತುಂಗಭದ್ರಾ ಸೇತುವೆಯಿಂದ ನದಿಗೆ ಹಾರಿದ ಘಟನೆ ಮಂಗಳವಾರ ನಡೆದಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಾವಣಗೆರೆ ನಗರದ ಬಾಡಾ ಕ್ರಾಸ್ ನಿವಾಸಿಗಳಾದ ಇಬ್ಬರು ಅನ್ಯ ಕೋಮಿಗೆ ಸೇರಿದ್ದು, ಇನ್ನೂ ಅಪ್ರಾಪ್ತರಾದರೂ ಪ್ರೀತಿಯ ಬಲೆಗೆ ಬಿದ್ದು, ಮದುವೆಗೆ ಮನೆಯವರ ವಿರೋಧವಿದೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
ಸಾಯಲು ಯತ್ನಿಸಿದವರನ್ನು ಸಿಂಚನ ಹಾಗೂ ಮುಸ್ಲಿಂ ಯುವಕ ಸಮೀರ್ ಎಂದು ಗುರುತಿಸಲಾಗಿದೆ.ಇಬ್ಬರಿಗೂ ಈಜು ಬರುತ್ತಿದ್ದು, ಈಜಿ ನದಿಯ ಮಧ್ಯ ದ್ವೀಪದಂತಿದ್ದ ಜಾಗದಲ್ಲಿ ಕುಳಿತು ಸ್ಥಳೀಯರ ಗಮನ ಸೆಳೆದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದ್ದಾರೆ.
ಹೊನ್ನಾಳಿ ಪೊಲೀಸರು ಅಪ್ರಾಪ್ತ ಜೋಡಿಯನ್ನು ವಿಚಾರಣೆಗೊಳಪಡಿಸಿದಾಗ, ಎರಡು ದಿನಗಳ ಹಿಂದೆ ಮೈಸೂರಿಗೆ ಹೋಗಿದ್ದರು.ನಂತರ ಶಿವಮೊಗ್ಗಕ್ಕೆ ವಾಪಸ್ ಬಂದರು. ಅಲ್ಲಿಂದ ಹೊನ್ನಾಳಿಗೆ ಆಗಮಿಸಿ ಸೇತುವೆಯಿಂದ ನದಿಗೆ ಹಾರಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪ್ರಾಪ್ತೆಯ ಪಾಲಕರು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪಹರಣದ ದೂರು ದಾಖಲಿಸಿದ್ದಾರೆ.






