ಕುಂದಗನ್ನಡದ ವಿಶಿಷ್ಟ ಜನಪದ ನೃತ್ಯ ಆಚರಣೆ – ಹೌಂದೇರಾಯನ ಓಲಗ
Views: 87
ಹೌಂದೇರಾಯನ ಕುಣಿತ ಮೂಲತಃ ತುಳಸಿ ಪೂಜೆಯ ಸಂದಭ೯ದಲ್ಲಿ ದೇವಾರಾಧನೆಯ ಭಾಗವಾಗಿ ಜನಪ್ರಿಯ ಕಲಾಪ್ರಕಾರ ಉಡುಪಿ ಜಿಲ್ಲೆಯ ಕುಂದಾಪುರ ಕರಾವಳಿಯ ಪ್ರದೇಶದಲ್ಲಿ ಈ ನೃತ್ಯಾರಾಧನೆ ಹೆಚ್ಚು ಪ್ರಸಿದ್ಧಿ, ಶತಮಾನಗಳ ಭವ್ಯ ಪರಂಪರೆಯನ್ನು ಹೊಂದಿರುವ ಈ ಕಲಾಪ್ರಕಾರವು ಇತ್ತೀಚಿನ ದಿನಗಳಲ್ಲಿ ವೇಗವಾಗಿ ಅವಸಾನದ ಅಂಚಿನಲ್ಲಿದ್ದರೂ ಅಲ್ಲಲ್ಲಿ ಶ್ರದ್ಧಾಭಕ್ತಿಯಿಂದ ಆಚರಣೆಯಲ್ಲಿದೆ. ಕಡಲಮಕ್ಕಳ ಒಡನಾಳ ಭಕ್ತಿ, ಆರಾಧನೆ ಸಮಪ೯ಣೆ ಮತ್ತು ಸದಾಶಯದ ಮಾಧ೯ನ ಮಿಶ್ರಣವೇ ಈ ಜನಪದ ನೃತ್ಯ -ಗೀತೆಯ ತಿರುಳು. ಕಾಲಿಗೆ ಗೆಜ್ಜೆ ಕಟ್ಟಿ ಲಯಬದ್ಧವಾಗಿ ಹೆಜ್ಜೆ ಹಾಕುತ್ತಾ ಭಾವಪರವಶರಾಗಿ ಹಾಡುತ್ತಾ ಭಾವುಕ ಸನ್ನಿವೇಶಗಳನ್ನು ಸೃಷ್ಟಿಸುವುದು ಅಪೂವ೯ ಕಲಾವಂತಿಗೆ ಇದರಲ್ಲಿ ಅಡಗಿದೆ. ಹಿನ್ನಲೆಗಾಯನ ಮತ್ತು ವಾದ್ಯವೃಂದವಿಲ್ಲದೆ ಕುಂದಾಪುರ ಕನ್ನಡದ ಆಡುಮಾತಿನ ಸೊಗಡಿನೊಂದಿಗೆ ತಾವೇ ಹಾಡುತ್ತಾ ಕುಣಿಯುದೇ ಈ ನೃತ್ಯದ ವಿಶೇಷತೆ.
ಹೌಂದರಾಯನೆಂಬ ತುಂಡರಸನು ಪ್ರಾಚೀನ ಜೈನ ರಾಜನಿಗೆ ಸಾಮಂತನಾಗಿ ಬಾರಕೂರು ಸಂಸ್ಥಾನದಲ್ಲಿ ಆಳುತ್ತಿದ್ದ ಎಂಬ ಐತಿಹ್ಯವಿದೆ ಜನಪರ ಆಡಳಿತದೊಂದಿಗೆ ಸದಾ ಕಲಾಪ್ರಿಯನಾಗಿದ್ದ ಹಾಗೂ ಆತನಿಗೆ ಹೊಗಳಿಕೆ ಎಂದರೆ ಇಷ್ಟವಾಗುತ್ತಿತ್ತು. ಮೊದಮೊದಲು ಹೊಗಳಿಕೆಯು ಕೇವಲ ಆಡುಮಾತಿಗೆ ಸೀಮಿತವಾಗಿತ್ತು. ಹೊಗಳುಭಟರ ಹಾಡು ಮತ್ತು ಕುಣಿಕೆಯಿಂದ ರಾಜನನ್ನು ಹೆಚ್ಚು ಸಂತೋಷ ಪಡಿಸಬಹುದು ಎಂಬ ದೃಷ್ಟಿಯಿಂದ ನೃತ್ಯ ಮತ್ತು ಹಾಡಿನಲ್ಲಿ ಆಭ೯ಟ ತೋರಿಸುತ್ತಾರೆ .ರಾಜನಿಗೆ ಮೆಚ್ಚುಗೆಯಾಗಿ ಕಡ್ಡಾಯಗೊಳಿಸಿದನು.
ಹೊಗಳಿಕೆ ಮತ್ತು ನೃತ್ಯ ಪ್ರಕಾರವನ್ನು ಮುಂದುವರಿಸ ಬೇಕೆ ?
ಹೌದಾದರೆ ಯಾರ ಹೆಸರಿನಲ್ಲಿ ಹೊಗಳಿಕೆ ಇರಬೇಕು ಎಂಬ ಜಿಜ್ಞಾಸೆ ಜನರಲ್ಲಿ ಚಚಿ೯ತವಾಯಿತು. ನಾವು ರಾಜನನ್ನು ದೇವರಂತೆ ಕಾಣುತ್ತಿದ್ದೇವೆ ಆದ್ದರಿಂದ ಹೌಂದೇರಾಯನ ಹೆಸರಿನಲ್ಲಿ ನಾವು ದೇವರನ್ನು ಹೊಗಳೋಣ ಎಂದು ಹಿರಿಯರು ತೀಮಾ೯ನಿಸಿದರು. ಫಲ ಸಮೃದ್ಧಿಗಾಗಿ ಪುರುಷರಿಂದ ನಡೆಯುವ ಕುಣಿತ ಇದಾಗಿದ್ದು, ಇಲ್ಲಿನ ಜನರ ಆಚರಣೆಯ ಪ್ರಕಾರ ಆರು ಪ್ರಕಾರದ ಕುಣಿತಗಳಿವೆ. ಕುಂದಾಪುರದ ಅಂಪಾರು ಭಾಗದಲ್ಲಿ ಆಡಳಿತ ನಡೆಸುತ್ತಿದ್ದನಂದು ರಾಯ ದೊರೆಯ ಭಂಡಾರದಲ್ಲಿ ದಿವಾಳಿಯಾದಾಗ ಆತನ ಮಂತ್ರಿ ಹೌಂದೇರಾಯನು ಪುನಃ ತುಂಬಿಸಿ ಕೊಟ್ಪ ಎಂಬ ಸ್ಮರಣಾರ್ಥವಾಗಿ ಸಮೃದ್ಧಿ ಕುಣಿತವಾಗಿ ಇದು ಸಂಪ್ರದಾಯದಲ್ಲಿದೆ.
ಪೂವ೯ಜ ರಿಂದ ಬಳುವಳಿಯಾಗಿ ಬಂದ ಜಾನಪದ ಕಲೆಯನ್ನು ಅಂದಿನ ಆ ದೃಢ ನಿರ್ಧಾರದಂತೆ ಇಪ್ಪತ್ತೊಂದನೆಯ ಶತಮಾನದಲ್ಲಿ ನೃತ್ಯ ಪ್ರಕಾರವನ್ನು ಉಳಿಸಲು ಉಡುಪಿ ತಾಲೂಕಿನ ಸಾಲಿಗ್ರಾಮ ಶ್ರೀ ಗುರುಮಾರುತಿ ಹೌಂದೇರಾಯನ ಜಾನಪದ ನೃತ್ಯತಂಡ ಇವರ ನೇತೃತ್ವದಲ್ಲಿ ಕುಂದಾಪುರ ತಾಲೂಕಿನಾದ್ಯಂತ ನಿರಂತರವಾಗಿ ಪ್ರದಶ೯ನ ನೀಡುತ್ತಾ ಬಂದಿದೆ . 12 ರಿಂದ 17 ಜನರಿರುವ 2 ಗಂಟೆಗಳ ಪ್ರದಶ೯ನ ನೀಡುವ ಈ ತಂಡ ತುಳಸಿಪೂಜೆ ಮತ್ತು ಸಾವಿರಹಣ್ಣಿನ ವಸಂತ ಪೂಜೆಗೆ ಶೃದ್ಧಾಭಕ್ತಿ ಯಿಂದ ದೇವತಾ ಆರಾಧನಾಕಲೆ. ಇಂದು ಮನರಂಜನೆಯ ದೃಷ್ಟಿಯಿಂದ ಗೃಹಪ್ರವೇಶ, ವಿವಿಧ ಹಬ್ಬ ಹರಿದಿನಗಳಲ್ಲಿ ಮನರಂಜನೆಗಾಗಿ ಆಚರಿಸಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ನಮ್ಮೂರ ಹಬ್ಬದಲ್ಲಿ ಪ್ರದಶ೯ನ ನೀಡಿ ಮೆಚ್ಚುಗೆ ಗಳಿಸಿದ್ದಾರೆ.
ಸ್ವಾಮಿ ಗಿಂದು ವಾಲ್ಗುವೆ… ತಾಯಿ ತುಳುಸಿ ವಾಲ್ಗುವೆ…
ಸವ೯ದೇವರಿಗೆ ವಾಲ್ಗುವೆ….
ಗಿರಿಗಳಿಗೆಲ್ಲ ವಾಲ್ಗುವೆ….
ಹೀಗೆ ಆರಂಭವಾಗುವ ವಾಲ್ಗದ ಆರು ಪ್ರಕಾರಗಳಿವೆ.
1-ಓಲಗ ಸಂಧಿ ಯಾರ ಮನೆಯಲ್ಲಿ ಹೌಂದರಾಯನ ಓಲಗ ಸೇವೆ ನಡೆಸುತ್ತಾರೋ ಆ ಮನೆಯ ಯಜಮಾನನ ಹೆಸರಿನಲ್ಲಿ ಈ ಹರಕೆ ಸೇವೆ ಕಥೆಯೊಂದಿಗೆ ಆರಂಭಗೊಳ್ಳುತ್ತದೆ.
2-ಬ್ಯಾಂಟಿ ಸಂಧಿ ರಾಜನ ಆಳ್ವಿಕೆ ಕಾಲದಲ್ಲಿ ಪ್ರಜೆಗಳ ಬೆಳೆ, ಆಸ್ತಿ ಮತ್ತು ಜೀವಹಾನಿ ಮಾಡುವ ಕಾಡು ಮೃಗಗಳ ಬೇಟೆಯಾಡುದನ್ನು, ಬೇಟೆಯಲ್ಲಿ ಸಹಕರಿಸಿದವರಿಗೆ ಬೇಟೆಯಾಡಿದ ಮೃಗಗಳ ಮಾಂಸವನ್ನು ಹಂಚುವುದನ್ನು ಮೈ ನವಿರೇಳಿಸುವಂತೆ ಈ ಭಾಗದಲ್ಲಿ ಹಾಡಲಾಗುವುದು.
3-ಕೊಡಂಗಿ ಸಂಧಿ ಇದು ಹನುಮಂತ ದೇವರ ಹೊಗಳಿಕೆಯ ಹಾಡು ಆಂಜನೆಯನನ್ನು ಸಲುಗೆಯಿಂದ ಕೊಡಂಗಿ ಎಂದು ಕರೆದು ಅವನಿಗಾಗಿ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ ಅವನನ್ನು ಅಣುಕಿಸುತ್ತಾ, ರೇಗಿಸುತ್ತಾ ಹಾಗೆಯೇ ಪೂಜಿಸಿ ಹೊಗಳಿಕೆಯಿಂದ ಸಂತೈಸುವುದು.
4-ಶಿವರಾಯ ಸಂಧಿ ಶಿವನನ್ನು ಸ್ತುತಿಸುತ್ತಾ ಹರಿಹರರು ಒಂದೆ ಎಂದು ಸಾರುತ್ತಾ ಶಿವ ಮತ್ತು ರಾಮನನ್ನು ಹೊಗಳೂದು.
5-ಕೋಲಾಟ ಸಂಧಿ ಶ್ರೀಕೃಷ್ಣನ ಲೀಲೆಯನ್ನು ಕೊಂಡಾಡುತ್ತಾ ಕೋಲಾಟದ ನೃತ್ಯ ದೊಂದಿಗೆ ಭಕ್ತಿಪರಾಕಾಷ್ಠೆಯ ಆರಾಧನೆ.
6-ಅಪಿ೯ತ ಸಂಧಿ ಈ ತನಕ ನೃತ್ಯ ಹಾಡುಗಳಿಂದ ನಡೆಸಿದ ಸೇವೆಗಳೆಲ್ಲವೂ ನಿಮಗೆ ಅಪಿ೯ತ ಎಂದು ಹಾಡುತ್ತಾ ವಂದಿಸುವುದು.
(ಇತ್ತೀಚೆಗೆ ಕುಂದಾಪುರ ತಾಲೂಕಿನ ಕೊಗಿ೯ ಹಳೆಮನೆ ಕುಟುಂಬಿಕ ರಿಂದ ಸಾವಿರ ಹಣ್ಣಿನ ವಸಂತ ಮತ್ತು ಹೌಂದೇರಾಯನ ಓಲಗಸೇವೆಯ ಸನ್ನಿವೇಶ )