ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಮಹಜರು ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನ

Views: 283
ಕನ್ನಡ ಕರಾವಳಿ ಸುದ್ದಿ: ಅಪ್ರಾಪ್ತ ಬಾಲಕಿಯ ಲೈಂಗಿಕ ದೌರ್ಜನಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸ್ಥಳ ಮಹಜರು ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ತಪ್ಪಿಸಲು ಯತ್ನಿಸಿದ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ನಾಲ್ವರು ಆರೋಪಿಗಳಲ್ಲಿ ಪ್ರಮುಖವಾದ ಉತ್ತರ ಪ್ರದೇಶ ಮುರದಾಬಾದ್ ಡಿನಂಗರ್‌ಪುರ ಲಾಲ್ವರ್ ನಿವಾಸಿ, ಪ್ರಸ್ತುತ ಮಣಿಪಾಲ ವಿಪಿನಗರದಲ್ಲಿ ವಾಸ ಮಾಡಿ ಕೊಂಡಿರುವ ಮೊಹಮ್ಮದ್ ಡ್ಯಾನೀಶ್ (29) ಪೊಲೀಸರಿಗೆ ಹಲ್ಲೆ ನಡೆಸಿದ್ದು, ಲಾಠಿ ಏಟಿನಿಂದ ಗಾಯಗೊಂಡಿದ್ದಾನೆ.

ಏನಿದು ಘಟನೆ
ಉಡುಪಿ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 8 ವರ್ಷದ ಬಾಲಕಿ ಮೇಲೆ ಆರೋಪಿ ಗಳು ಲೈಂಗಿಕ ದೌರ್ಜನ್ಯ ಎಸಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಜು. 11ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.
ಆರೋಪಿ ಮೊಹಮ್ಮದ್ ಡ್ಯಾನೀಶ್‌ನನ್ನು ತನಿಖೆಗೆ ಒಳಪಡಿಸಿ ಜು. 13ರಂದು ತನಿಖೆಯ ಬಗ್ಗೆ ತಾಂಗೋಡು 2ನೇ ಕ್ರಾಸ್ ಹಾಡಿ ಬಳಿಯಲ್ಲಿ ಕೃತ್ಯವೆಸಗಿದ ಸ್ಥಳವನ್ನು ಪಂಚನಾಮೆ ಮಾಡುವ ಸಮಯದಲ್ಲಿ ಆರೋಪಿಯು ತನ್ನ ಕೈಕೋಳ ಹಿಡಿದುಕೊಂಡಿದ್ದ ಪೊಲೀಸ್ ಸಿಬಂದಿ ರಿತೇಶ್ ಪೂಜಾರಿ ಅವರ ಎದೆಗೆ ಎರಡೂ ಕೈಗಳಿಂದ ಗುದ್ದಿ ದೂಡಿ ನೆಲಕ್ಕೆ ಬೀಳಿಸಿ ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿಹಾಕಲು ಯತ್ನಿಸಿದ್ದ. ಈ ವೇಳೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ತಡೆದಾಗ ಅವರನ್ನೂ ಒದೆಯಲು ಬಂದಿದ್ದ. ಆಗ ಲಾಠಿಯಿಂದ ಆತನ ಕಾಲಿಗೆ ಹೊಡೆದು ಅವನನ್ನು ಬಂಧಿಸಲಾಗಿದೆ.ಗಾಯಗೊಂಡ ಪೊಲೀಸ್ ರಿತೇಶ್ ಹಾಗೂ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಪ್ರಮುಖ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.






