ಧಾರ್ಮಿಕ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಗ್ಯಾಸ್ ಮುಗಿದರೂ ಭೋಜನ ವ್ಯವಸ್ಥೆಗೆ ಯಾವುದೇ ಸಮಸ್ಯೆ ಇಲ್ಲ

Views: 19

ಕನ್ನಡ ಕರಾವಳಿ ಸುದ್ದಿ: ಉಡುಪಿಯ ಶ್ರೀ ಕೃಷ್ಣಮಠದಲ್ಲಿ ನಡೆಯುವ ಅನ್ನದಾನ ಹಾಗೂ ಊಟೋಪಚಾರ ವ್ಯವಸ್ಥೆಗೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಎಂದು ಶಿರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ ತಿಳಿಸಿದ್ದಾರೆ.

ಪ್ರತಿ ದಿನ ಸಾವಿರಾರು ಭಕ್ತರು ಭೋಜನ ಸ್ವೀಕರಿಸುವ ಉಡುಪಿ ಶ್ರೀ ಕೃಷ್ಣಮಠವನ್ನು ‘ಅನ್ನ ಬ್ರಹ್ಮನ ದೇಗುಲ’ ಎಂದೇ ಕರೆಯಲಾಗುತ್ತದೆ. ಇಲ್ಲಿ ಪರಂಪರೆಯಿಂದ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವ ಪದ್ಧತಿ ಇದ್ದರೂ, ಇತ್ತೀಚಿನ ವರ್ಷಗಳಲ್ಲಿ ಅಡುಗೆ ಕಾರ್ಯಕ್ಕೆ ಅನಿಲದ ಅವಲಂಬನೆಯೂ ಹೆಚ್ಚಾಗಿದೆ. ಸದ್ಯ ಅಡುಗೆ ಅನಿಲ ಲಭ್ಯವಿದ್ದು, ಯಾವುದೇ ತೊಂದರೆ ಇಲ್ಲ. ಆದರೆ ಅನಿಲ ಲಭ್ಯವಾಗದ ಪರಿಸ್ಥಿತಿ ಎದುರಾದರೂ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವ ವ್ಯವಸ್ಥೆ ಸದಾ ಸಿದ್ಧವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಉಡುಪಿ ಕೃಷ್ಣಮಠದಲ್ಲಿ ಕಟ್ಟಿಗೆ ಬಳಸಿ ಅಡುಗೆ ಮಾಡುವ ಸಂಪ್ರದಾಯ ಇಂದಿಗೂ ಉಳಿದಿದ್ದು, ಈ ಉದ್ದೇಶಕ್ಕಾಗಿ ಮಠದ ವತಿಯಿಂದ ಕಾಡನ್ನೇ ಬೆಳೆಸಲಾಗುತ್ತದೆ. ಸುಮಾರು 36 ವರ್ಷಕ್ಕೊಮ್ಮೆ ಕಾಡಿನಿಂದ ಕಟ್ಟಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ಬಂದರೆ ಕಟ್ಟಿಗೆ ತರಿಸಿಕೊಂಡು ಎಷ್ಟು ಜನರಿಗಾದರೂ ಊಟೋಪಚಾರ ವ್ಯವಸ್ಥೆ ಮಾಡುವ ಧೈರ್ಯ ಮಠಕ್ಕೆ ಇದೆ ಎಂದು ತಿಳಿಸಿದರು.

ಇದಲ್ಲದೆ, ಅಡುಗೆ ವ್ಯವಸ್ಥೆಯನ್ನು ಮತ್ತಷ್ಟು ಸ್ವಾವಲಂಬಿ ಮಾಡುವ ಉದ್ದೇಶದಿಂದ ಬಯೋಗ್ಯಾಸ್ ಘಟಕ ಅಳವಡಿಸುವ ಕಾರ್ಯವೂ ಅಂತಿಮ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟಾರೆ, ಯಾವುದೇ ಸಂಕಷ್ಟದ ಪರಿಸ್ಥಿತಿಯಲ್ಲೂ ಉಡುಪಿ ಶ್ರೀ ಕೃಷ್ಣಮಠದಲ್ಲಿ ನಡೆಯುವ ಅನ್ನದಾನ ಸೇವೆಗೆ ಅಡ್ಡಿ ಉಂಟಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 

Related Articles

Back to top button
error: Content is protected !!