ಕೋಟೇಶ್ವರ: ಬಾಡಿಗೆ ಹಣ ಕೇಳಲು ಹೋದ ಅಂಗಡಿ ಮಾಲೀಕರ ಮೇಲೆ ಬಾಡಿಗೆದಾರ ಹಲ್ಲೆ
Views: 131
ಕುಂದಾಪುರ: ಬಾಡಿಗೆ ಹಣ ಕೇಳಲು ಹೋದ ಅಂಗಡಿ ಮಾಲೀಕರ ಮೇಲೆ ಬಾಡಿಗೆದಾರ ಹಲ್ಲೆ ನಡೆಸಿದ ಘಟನೆ ಕೋಟೇಶ್ವರದಲ್ಲಿ ನಡೆದಿದೆ.
ಕೋಟೇಶ್ವರ ಗ್ರಾಮದ ನಿವಾಸಿ ಹೆಚ್. ರಂಜಿತ್ ಶೆಟ್ಟಿ (37) ಅವರ ತಂದೆ ಚಂದ್ರಶೇಖರ್ ಶೆಟ್ಟಿ ಅವರ ಹೆಸರಿನಲ್ಲಿ ಕೋಟೇಶ್ವರ ಬೈಪಾಸ್ ಬಳಿ 5 ಅಂಗಡಿ ಕೋಣೆಗಳಿವೆ. ಅದರಲ್ಲಿ ಒಂದು ಕೋಣೆಯನ್ನು ಪ್ರಮೋದ್ ರಾವ್ ಎಂಬುವರಿಗೆ ಬಾಡಿಗೆಗೆ ನೀಡಲಾಗಿತ್ತು. ಆರೋಪಿ ಕಳೆದ 11 ತಿಂಗಳಿಂದ ಬಾಡಿಗೆ ಹಣ ನೀಡಿರಲಿಲ್ಲ.
ಅ.29 ರಂದು ಸಂಜೆ 5 ಗಂಟೆಗೆ ಚಂದ್ರಶೇಖರ್ ಶೆಟ್ಟಿ ಅವರು ಬಾಡಿಗೆ ಹಣ ಪಡೆಯಲು ಅಂಗಡಿ ಬಳಿ ಹೋದಾಗ ಆರೋಪಿ ಪ್ರಮೋದ್ ರಾವ್ ಅವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. “ಇನ್ನು ಮುಂದೆ ಬಾಡಿಗೆ ಕೇಳಲು ಬಂದರೆ ಕೈಕಾಲು ಮುರಿದು ಹಾಕುತ್ತೇನೆ” ಎಂದು ಬೆದರಿಕೆ ಹಾಕಿ ಕೈಯಿಂದ ಕೆನ್ನೆಗೆ ಹೊಡೆದು, ಕಾಲಿನಿಂದ ಹೊಟ್ಟೆಗೆ ತುಳಿದು, ಉಗುರುಗಳಿಂದ ಪರಚಿ ಕುತ್ತಿಗೆ ಒತ್ತಿ ಹಿಡಿದು ದೂಡಿ ಹಾಕಿದ್ದಾನೆ. ಇದರಿಂದ ಚಂದ್ರಶೇಖರ್ ಶೆಟ್ಟಿ ಅವರ ಎರಡೂ ಮುಂಗೈಗಳಿಗೆ ರಕ್ತಗಾಯಗಳಾಗಿವೆ.
ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






