ಉಡುಪಿ ರಾಜ್ಯದ ಮೊದಲ ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿ ಅಧಿಕೃತ ಘೋಷಣೆ
Views: 16
ಕನ್ನಡ ಕರಾವಳಿ ಸುದ್ದಿ: ಶಿಕ್ಷಣ ಮತ್ತು ಸಾಕ್ಷರತೆಯಲ್ಲಿ ರಾಜ್ಯಕ್ಕೇ ಮಾದರಿಯಾಗಿರುವ ಕರಾವಳಿಯ ಉಡುಪಿ ಜಿಲ್ಲೆಯ ಮುಕುಟಕ್ಕೆ ಮತ್ತೊಂದು ಐತಿಹಾಸಿಕ ಗರಿ ಮೂಡಿದೆ.
ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯನ್ನು ‘ಸಂಪೂರ್ಣ ಸಾಕ್ಷರತಾ ಜಿಲ್ಲೆ’ ಎಂದು ಅಧಿಕೃತವಾಗಿ ಘೋಷಿಸಲು ರಾಜ್ಯ ಸರ್ಕಾರ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಅಧಿಕೃತ ನಡವಳಿ ಆದೇಶವನ್ನು ಹೊರಡಿಸಿದ್ದು, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (ಸಿಇಒ) ಜಿಲ್ಲೆಯನ್ನು ಸಂಪೂರ್ಣ ಸಾಕ್ಷರ ಜಿಲ್ಲೆಯೆಂದು ಘೋಷಿಸಲು ಅಧಿಕಾರ ನೀಡಿದ್ದಾರೆ.
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ (ವಯಸ್ಕರ ಶಿಕ್ಷಣ ಬ್ಯೂರೋ) ಪ್ರಮಾಣಿತ ಕಾರ್ಯವಿಧಾನದ ಪ್ರಕಾರ, ಅತೀ ಹೆಚ್ಚು ವಯಸ್ಸಾದ ಹಾಗೂ ಬೌದ್ಧಿಕ ಅಸಮರ್ಥತೆ ಹೊಂದಿರುವವರ ಕಾರಣದಿಂದ ಶೇ. 100ರಷ್ಟು ಸಾಕ್ಷರತೆ ಅಸಾಧ್ಯವೆಂದು ಪರಿಗಣಿಸಿ, ಶೇಕಡಾ 95 ಅಥವಾ ಅದಕ್ಕಿಂತ ಹೆಚ್ಚು ಸಾಕ್ಷರತಾ ಪ್ರಮಾಣ ಸಾಧಿಸಿದ ಪ್ರದೇಶವನ್ನು ‘ಸಂಪೂರ್ಣ ಸಾಕ್ಷರ’ ಎಂದು ಪರಿಗಣಿಸಲಾಗುತ್ತದೆ. ಉಡುಪಿ ಜಿಲ್ಲೆಯು ಶೇ. 95ಕ್ಕಿಂತ ಹೆಚ್ಚಿನ ಸಾಕ್ಷರತೆ ಹೊಂದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಉಡುಪಿ ಜಿಲ್ಲೆಯ ಎಲ್ಲಾ 155 ಗ್ರಾಮ ಪಂಚಾಯತ್‌ಗಳು, 7 ತಾಲೂಕು ಪಂಚಾಯತ್‌ಗಳು ಹಾಗೂ 8 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮಗ್ರ ಸಮೀಕ್ಷೆ ನಡೆಸಿ, ಅನಕ್ಷರಸ್ಥರಿಗೆ ಓದು-ಬರಹ, ಮೂಲ ಗಣಿತ ಕಲಿಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿ ನವಸಾಕ್ಷರರನ್ನಾಗಿಸಲಾಗಿತ್ತು. ತಳಮಟ್ಟದಿಂದ ದೃಢೀಕರಣ ಪತ್ರಗಳನ್ನು ಪಡೆದು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಶಿಫಾರಸಿನ ಮೇರೆಗೆ ಸರ್ಕಾರಕ್ಕೆ ಅಂತಿಮ ಪ್ರಸ್ತಾವನೆ ಸಲ್ಲಿಸಲಾಗಿತ್ತು.






