9ನೇ ತರಗತಿ ಬಾಲಕಿ ಅಪಹರಣ ಪ್ರಕರಣ; ಬಾಗಲಕೋಟೆ ಯುವಕ ಅರೆಸ್ಟ್
Views: 45
ಕನ್ನಡ ಕರಾವಳಿ ಸುದ್ದಿ: ಶಾಲೆಗೆ ತೆರಳುತ್ತಿದ್ದ 9ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕಾರಿನಲ್ಲಿ ಕರೆದೊಯ್ದಿದ್ದಾನೆ ಎಂಬ ಆರೋಪದಡಿ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೊ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅನ್ವಯವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಂಧಿತನನ್ನು ಬಾಗಲಕೋಟೆ ಮೂಲದ 23 ವರ್ಷದ ಗೂಡಸಾಬ್ ಅಲಿಯಾಸ್ ಆಶಿಫ್ ಎಂದು ಗುರುತಿಸಲಾಗಿದೆ. ಈತ ಉಳ್ಳಾಲ ಪರಿಸರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಬಾಗಲಕೋಟೆಯಿಂದ ಬಂದಿದ್ದ ಕುಟುಂಬವೊಂದು ಉಳ್ಳಾಲ ತಾಲೂಕಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದು, ಆ ಮನೆಯ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಸ್ಥಳೀಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದರು.
ಅಕ್ಟೋಬರ್ 28ರ ಮಂಗಳವಾರ ಬೆಳಗ್ಗೆ ಪೋಷಕರು ಎಂದಿನಂತೆ ಇಬ್ಬರು ಮಕ್ಕಳನ್ನು ಶಾಲಾ ವಾಹನದ ಮೂಲಕ ಕಳುಹಿಸಿದ್ದರು. ಆದರೆ, ಹಿರಿಯ ಮಗಳು ಶಾಲೆಗೆ ಬಂದಿಲ್ಲವೆಂದು ತಿಳಿದ ಶಿಕ್ಷಕಿ ತಕ್ಷಣವೇ ಪೋಷಕರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಇದಕ್ಕೂ ಮೊದಲು ಆರೋಪಿ ಶಾಲೆಯ ಸಮೀಪ ತನ್ನನ್ನು ಹಿಂಬಾಲಿಸಿ ಮಾತನಾಡಿಸಲು ಪ್ರಯತ್ನಿಸುತ್ತಿದ್ದ ವಿಚಾರವನ್ನು ಬಾಲಕಿ ತಾಯಿಯ ಗಮನಕ್ಕೆ ತಂದಿದ್ದಳು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ಆರೋಪಿಯನ್ನು ಭೇಟಿಯಾಗಿ, ತಮ್ಮ ಕುಟುಂಬ ಪರಿಶಿಷ್ಟ ಜಾತಿಗೆ ಸೇರಿರುವುದನ್ನೂ ಹಾಗೂ ಮಗಳು ಅಪ್ರಾಪ್ತೆಯಾಗಿರುವುದನ್ನೂ ತಿಳಿಸಿ, ಆಕೆಯ ಹಿಂದೆ ಬೀಳದಂತೆ ಎಚ್ಚರಿಸಿದ್ದರು ಎಂದು ಹೇಳಲಾಗಿದೆ.
ಆದರೆ, ಮಗಳು ಕಾಣೆಯಾಗಿರುವುದು ತಿಳಿದ ಬಳಿಕ ತಾಯಿ ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಗೂಡಸಾಬ್ ತನ್ನ ಮಗಳನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ದೂರನ್ನು ಸ್ವೀಕರಿಸಿದ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬಾಲಕಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ ಉಳ್ಳಾಲ ಪೊಲೀಸರು ಮಂಗಳವಾರ ರಾತ್ರಿಯೇ ಸೋಮೇಶ್ವರದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಅಪ್ರಾಪ್ತ ವಿದ್ಯಾರ್ಥಿನಿಯನ್ನು ರಕ್ಷಿಸಲಾಗಿದೆ. ಬಾಲಕಿಯ ಹೇಳಿಕೆಯನ್ನು ಆಧರಿಸಿ ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದ್ದು, ಬಳಿಕ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.






