ಚಂದನ್ ಶೆಟ್ಟಿ “ಏನೇ ನಿನ್ನ ಮೈಮಾಟದಾಟ” ಹಾಡಿಗೆ ನಿವೇದಿತಾ ಗೌಡ ಟಾಂಗ್!
Views: 129
ಕನ್ನಡ ಕರಾವಳಿ ಸುದ್ದಿ: ಕನ್ನಡದ ಖ್ಯಾತ ರ‍್ಯಾಪರ್ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ‘ಮೈಮಾಟ’ ಎಂಬ ಹೊಸ ಆಲ್ಬಮ್ ಹಾಡನ್ನು ಬಿಡುಗಡೆ ಮಾಡಿದ್ದಾರೆ.
ಚಂದನ್ ಶೆಟ್ಟಿ ಮೈಮಾಟ ಹಾಡಿನಲ್ಲೇನಿದೆ?
“ಏನೇ ನಿನ್ನ ಮೈಮಾಟದಾಟ, ಇನ್ ಏಳು ಜನುಮಕ್ಕೂ ಕಲಿಸಿಯ ಪಾಠ…”, “ನೀ ಹೋದಮೇಲೆ ನಾ ಸೋತಿಲ್ಲ, ಬದಲಾದೆ! ನನ್ನ ಪ್ರೀತಿ ಸೋತಿರಬಹುದು ಆದರೆ ನಾ ಸೋತಿಲ್ಲ…” ಎಂಬ ಸಾಲುಗಳನ್ನು ಕೇಳಿದ ನೆಟ್ಟಿಗರು, ಇದು ಚಂದನ್ ತಮ್ಮ ಮಾಜಿ ಪತ್ನಿ ನಿವೇದಿತಾ ಗೌಡ ಅವರನ್ನು ಗುರಿಯಾಗಿಸಿಕೊಂಡೇ ಬರೆದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡಲು ಆರಂಭಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ಹಾಡು ಇದೀಗ ತೀವ್ರ ಚರ್ಚೆಗೂ ಕಾರಣವಾಗಿದೆ.
ಈ ಹಾಡು ಬಿಡುಗಡೆಯಾದ ಎರಡೇ ದಿನಗಳಲ್ಲಿ ಚಂದನ್ ಶೆಟ್ಟಿ ಅವರ ಮಾಜಿ ಪತ್ನಿ ನಿವೇದಿತಾ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಬರೆದುಕೊಂಡಿರುವ ಸಾಲುಗಳು ಈಗ ನೆಟ್ಟಿಗರ ಗಮನ ಸೆಳೆದಿವೆ.
ನಿವೇದಿತಾ ಗೌಡ ಪೋಸ್ಟ್‌ನಲ್ಲಿ ಏನಿದೆ?
‘ಹಳೆ ಭೂತ ನನ್ನ ಬಿಡುತ್ತಿಲ್ಲ… ಆಸೆಗಳಿರುವ ಯುವತಿಗೆ ಉತ್ತಮ ಗೆಳೆಯರಿದ್ದು, ಆಕೆಯ ಪ್ರೇಮ ಜೀವನ ಮಾತ್ರ ಕಷ್ಟಕರವಾಗಿದ್ದರೆ ಅದನ್ನು ರೊಮ್ಯಾಂಟಿಕ್ ಕಾಮಿಡಿ ಎನ್ನಬಹುದು ಎಂದು ಎಲ್ಲೋ ಓದಿದ್ದೆ. ಆದರೆ ನನ್ನ ವಿಚಾರದಲ್ಲಿ ನನ್ನ ಪ್ರೇಮ ಪಯಣ ಯಾವುದೋ ಹಾರರ್ ಕಥೆಯಂತಾಗಿದೆ. ನಿಜ ಹೇಳಬೇಕೆಂದರೆ, ನನ್ನ ಗತಕಾಲದ ನೆನಪುಗಳು ನನ್ನನ್ನು ಒಂಟಿಯಾಗಿ ಬಿಡುತ್ತಲೇ ಇಲ್ಲ’ ಎಂದು ನಿವೇದಿತಾ ಬರೆದುಕೊಂಡಿದ್ದಾರೆ.
ನಿವೇದಿತಾ ಗೌಡ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದೇ ಪೋಸ್ಟ್ ನೋಡಿದ ನೆಟ್ಟಿಗರು, ‘ಪಕ್ಕಾ ಇದು ಚಂದನ್ ಶೆಟ್ಟಿಗೆ ಟಾಂಗ್ ಕೊಟ್ಟಂತೆ ಇದೆ’ ಎಂದು ಭಿನ್ನ, ವಿಭಿನ್ನವಾಗಿ ಕಮೆಂಟ್ ಹಾಕಿದ್ದಾರೆ.






