ಇತರೆ

ಆಂಧ್ರ ಕರಾವಳಿಗೆ ಅಪ್ಪಳಿಸಿದ ಅರ್ನಾಬ್ ಚಂಡಮಾರುತ: ಅಪಾರ ಹಾನಿ, ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್!

Views: 31

ಕನ್ನಡ ಕರಾವಳಿ ಸುದ್ದಿ:  ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಪ್ರಖರ್ ಜೈನ್ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಬುಧವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಚಂಡಮಾರುತದ ಕಣ್ಣು ನರಸಾಪುರದಿಂದ ಕೇವಲ 30 ಕಿ.ಮೀ, ಯಾಣಂನಿಂದ 55 ಕಿ.ಮೀ, ಕಾಕಿನಾಡದಿಂದ 70 ಕಿ.ಮೀ ಮತ್ತು ಮಚಲಿಪಟ್ಟಣದಿಂದ 90 ಕಿ.ಮೀ ದೂರದಲ್ಲಿತ್ತು.

ಕಾಕಿನಾಡ, ಕೋನಸೀಮಾ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಗಂಟೆಗೆ 125-135 ಕಿ.ಮೀ ವೇಗದಲ್ಲಿ ಭೀಕರ ಬಿರುಗಾಳಿ ಬೀಸುತ್ತಿದ್ದು, ಭಾರೀ ಆತಂಕ ಸೃಷ್ಟಿಸಿದೆ.

ಉತ್ತರದ ಶ್ರೀಕಾಕುಳಂನಿಂದ ದಕ್ಷಿಣದ ಬಾಪಟ್ಲಾವರೆಗೆ ಚಂಡಮಾರುತದ ಪ್ರಭಾವ ತೀವ್ರವಾಗಿ ಗೋಚರಿಸಿದೆ. ರಾಜ್ಯ ಸಚಿವಾಲಯದ ನಿಯಂತ್ರಣ ಕೊಠಡಿಗೆ ಬಂದ ವರದಿಗಳ ಪ್ರಕಾರ, ನೂರಾರು ಮರಗಳು ಧರೆಗುರುಳಿವೆ, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಮತ್ತು ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ.

ಮಂಗಳವಾರ ಮಧ್ಯರಾತ್ರಿಯ ವೇಳೆಗೆ ವಿಶಾಖಪಟ್ಟಣಂನಲ್ಲಿ ಅತಿ ಹೆಚ್ಚು ಅಂದರೆ 200.20 ಮಿ.ಮೀ. ಮಳೆಯಾಗಿದೆ. ವಿಜಯನಗರಂ ಜಿಲ್ಲೆಯ ಕೊತ್ತವಲಸದಲ್ಲಿ 162.75 ಮಿ.ಮೀ. ಮಳೆಯಾದ ವರದಿಯಾಗಿದೆ. ಕಾಕಿನಾಡ ಮತ್ತು ಯಾಣಂ ಪ್ರದೇಶಗಳಲ್ಲಿ ಸಮುದ್ರದ ಅಲೆಗಳು 1.5 ರಿಂದ 2.5 ಮೀಟರ್‌ಗಳಷ್ಟು (ಕೆಲವೆಡೆ 5-8 ಮೀಟರ್) ಎತ್ತರಕ್ಕೆ ಜಿಗಿಯುತ್ತಿವೆ.

ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ 63 ರೈಲುಗಳನ್ನ ರದ್ದುಗೊಳಿಸಲಾಗಿದ್ದು, 15 ರೈಲುಗಳ ವೇಳಾಪಟ್ಟಿಯನ್ನ ಬದಲಾಯಿಸಲಾಗಿದೆ. ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶಾಖಪಟ್ಟಣಂ ಜಿಲ್ಲೆಯಲ್ಲಿ 160 ಬಸ್ ಸೇವೆಗಳನ್ನ ರದ್ದುಗೊಳಿಸಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ವಿಶಾಖಪಟ್ಟಣಂ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಾತ್ರಿ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಕತ್ತಿಪುಡಿ ಮತ್ತು ಒಂಗೋಲ್ ನಡುವಿನ ರಾಷ್ಟ್ರೀಯ ಹೆದ್ದಾರಿ 16 ಸೇರಿದಂತೆ ಹಲವೆಡೆ ಮರಗಳು ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ.

ಕಾಕಿನಾಡ ಮತ್ತು ಕೋನಸೀಮಾ ಜಿಲ್ಲೆಗಳಲ್ಲಿ ವಿದ್ಯುತ್ ಕಂಬಗಳು ಹಾಗೂ ಮೊಬೈಲ್ ಟವರ್‌ಗಳು ನೆಲಕ್ಕುರುಳಿದ್ದು, ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಅಲ್ಲವರಂನಲ್ಲಿರುವ ಒಎನ್‌ಜಿಸಿ (ONGC) ಘಟಕದ ಆವರಣದ ಗೋಡೆಯವರೆಗೂ ಸಮುದ್ರದ ನೀರು ನುಗ್ಗಿದೆ. ಕೋಳಿ ಫಾರ್ಮ್‌ಗಳು ಮತ್ತು ತಗಡಿನ ಶೆಡ್‌ಗಳು ಗಾಳಿಗೆ ಹಾರಿಹೋಗಿವೆ.

ಮುನ್ನೆಚ್ಚರಿಕಾ ಕ್ರಮವಾಗಿ ಅಧಿಕಾರಿಗಳು ತಗ್ಗು ಪ್ರದೇಶದ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಚಿನ್ನ ಲಂಕಾ, ಪಿಎಂ ಲಂಕಾ, ಮತ್ತು ವೇಮುಲದೀವಿ ಗ್ರಾಮಗಳಿಂದ ಸುಮಾರು 3,000 ಜನರನ್ನು ಪುನರ್ವಸತಿ ಕೇಂದ್ರಗಳಿಗೆ ರವಾನಿಸಲಾಗಿದೆ.

ಸದ್ಯ ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಮುಂದುವರಿದಿದ್ದು, ರಕ್ಷಣಾ ಕಾರ್ಯಾಚರಣೆ ಹಾಗೂ ವಿದ್ಯುತ್ ಮರುಸ್ಥಾಪಿಸುವ ಕೆಲಸ ಭರದಿಂದ ಸಾಗುತ್ತಿದೆ.

Related Articles

Back to top button
error: Content is protected !!