ವೃದ್ಧರ ಆರೈಕೆ ಮಾಡದಿದ್ದರೆ ಆಸ್ತಿ ವರ್ಗಾವಣೆ ರದ್ದು!
Views: 12
ಕನ್ನಡ ಕರಾವಳಿ ಸುದ್ದಿ: ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ಮಕ್ಕಳು ಅಥವಾ ಇತರರಿಗೆ ವರ್ಗಾಯಿಸುವ ಸಂದರ್ಭದಲ್ಲಿ ವರ್ಗಾವಣೆ ಪತ್ರದಲ್ಲಿ ‘ಹಿರಿಯ ನಾಗರಿಕರನ್ನು ನೋಡಿಕೊಳ್ಳ ಲಾಗುವುದು’ ಎಂಬ ಸ್ಪಷ್ಟ ಷರತ್ತು ಇರಬೇಕೆಂಬುದು ಕಡ್ಡಾಯವಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆ ಮೂಲಕ, ಅಪ್ಪ-ಅಮ್ಮನಿಂದ ಆಸ್ತಿ ಪಡೆದು ನಂತರ ಗಿಫ್ಟ್ ಡೀಡ್ನಲ್ಲಿ ಪಾಲನೆ ಮಾಡಲಾಗುವುದೆಂಬ ಷರತ್ತಿಲ್ಲವೆಂದು ಹೆತ್ತವರನ್ನು ಹೊರಹಾಕುವ ಮನೋಭಾವ ಹೊಂದಿರುವ ಮಕ್ಕಳಿಗೆ ನ್ಯಾಯಾಲಯ ತಕ್ಕ ಪಾಠ ಕಲಿಸಿದೆ.
ದಾಕ್ಷಾಯಿಣಿ ಹಾಗೂ ಆಕೆಯ ಪತಿ ಚಂದ್ರು ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, “ಆಸ್ತಿ ವರ್ಗಾವಣೆ ವೇಳೆ ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಕುರಿತು ಇಬ್ಬರ ನಡುವೆ ಒಪ್ಪಂದ ಅಥವಾ ತಿಳಿವಳಿಕೆ ಇತ್ತೆಂಬುದನ್ನು ದೂರಿನಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಿದ್ದರೆ ಸಾಕು. ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯಿದೆ- 2007ರ ಸೆಕ್ಷನ್ 23ರಡಿ ಆಸ್ತಿ ವರ್ಗಾವಣೆ ರದ್ದುಪಡಿಸುವ ಅಧಿಕಾರ ಎಸಿಗೆ ಇದೆ,” ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, ಶಿವಮೊಗ್ಗ ಎಸಿ 2025ರ ಸೆ.8ರಂದು ಮಗಳ ಪರ ಮಾಡಿದ್ದ ಡೀಡ್ ರದ್ದುಗೊಳಿಸಿ ಹೊರಡಿಸಿದ್ದ ಆದೇಶ ಹಾಗೂ ನಂತರ ಹೊರಡಿಸಿದ ತಿದ್ದುಪಡಿ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ತೀರ್ಪಿನ ಸಾರಾಂಶ: ರಿಲೀಸ್ ಡೀಡ್ನಲ್ಲಿ ಮಗಳು ತನ್ನ ತಂದೆಯನ್ನು ನೋಡಿಕೊಳ್ಳಬೇಕು ಎಂಬ ಸ್ಪಷ್ಟ ಷರತ್ತು ಇಲ್ಲದ ಕಾರಣ ಸೆಕ್ಷನ್ 23 ಅನ್ವಯಿಸುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಈ ವಾದ ತಿರಸ್ಕರಿಸಿದ ಹೈಕೋರ್ಟ್, “ವರ್ಗಾವಣೆ ಪತ್ರದಲ್ಲಿರುವ ಪದಗಳನ್ನು ಮಾತ್ರ ಆಧಾರವನ್ನಾಗಿಸದೆ, ಆಸ್ತಿ ವರ್ಗಾವಣೆಯ ಹಿಂದಿನ ಉದ್ದೇಶ, ಪಕ್ಷಗಳ ನಡುವಿನ ತಿಳಿವಳಿಕೆ ಹಾಗೂ ಸುತ್ತಮುತ್ತಲಿನ ಎಲ್ಲಾ ಪರಿಸ್ಥಿತಿಗಳನ್ನು ಪರಿಶೀಲಿಸಬೇಕು,” ಎಂದು ಹೇಳಿದೆ.
ಅಲ್ಲದೆ, ”ರಿಲೀಸ್ ಡೀಡ್ನಲ್ಲಿ ಪಾಲನೆ ಕುರಿತು ಸ್ಪಷ್ಟ ಷರತ್ತು ಇಲ್ಲದಿರುವುದರಿಂದ ಮಾತ್ರ ಸೆಕ್ಷನ್ 23ರ ಕ್ರಮವನ್ನು ತಡೆಯಲು ಸಾಧ್ಯವಿಲ್ಲ. ಆಸ್ತಿ ವರ್ಗಾವಣೆ ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಒಪ್ಪಂದ ಅಥವಾ ನಿರೀಕ್ಷೆಯ ಆಧಾರದ ಮೇಲೆ ನಡೆದಿತ್ತೇ ಎಂಬುದು ಮುಖ್ಯ. ಹಿರಿಯ ನಾಗರಿಕರು ತಮ್ಮ ಅರ್ಜಿಯಲ್ಲಿ ಇಂತಹ ತಿಳಿವಳಿಕೆ ಅಥವಾ ಒಪ್ಪಂದವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದರೆ, ಎಸಿ ಅದನ್ನು ಪರಿಶೀಲಿಸಬೇಕು. ದಾಖಲೆಯಲ್ಲಿನ ಸ್ಪಷ್ಟ ಷರತ್ತು ಮತ್ತು ಇಬ್ಬರ ನಡುವೆ ಇದ್ದ ನೈಜ ತಿಳಿವಳಿಕೆ ಎರಡೂ ಬೇರೆ ಬೇರೆ ವಿಚಾರಗಳಾಗಿವೆ” ಎಂದು ನ್ಯಾಯಾಲಯ ಹೇಳಿದೆ.
ಜತೆಗೆ, ಜಮೀನು ಬರೆಸಿಕೊಂಡಿದ್ದಕ್ಕೆ ತನ್ನ ತಂದೆಗೆ ಹಣ ನೀಡಲಾಗಿತ್ತು ಎಂದು ವಾದಿಸಿದ್ದ ಪುತ್ರಿ, ಅದನ್ನು ಸಾಬೀತುಪಡಿಸಲು ಹಿಂದಿನ ದಿನಾಂಕದ ಒಂದು ರಸೀದಿ ಸೃಷ್ಟಿಸಿದ್ದರು. ಆದರೆ, ಹೈಕೋರ್ಟ್ ಹಣ ನೀಡಿರುವುದು ಹಾಗೂ ರಸೀದಿ ಸೃಷ್ಟಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಆ ಬಗ್ಗೆ ಆದಾಯ ತೆರಿಗೆ ಇಲಾಖೆಯ ತನಿಖೆಗೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಭದ್ರಾವತಿ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಸರ್ವೆ ನಂ.42ರಲ್ಲಿರುವ 1 ಎಕರೆ 30 ಗುಂಟೆ ಜಮೀನಿನ ಸಂಬಂಧ 75 ವರ್ಷದ ಜಿ.ಬೈರಪ್ಪ ತಮ್ಮ ಮಗಳು ದಾಕ್ಷಾಯಿಣಿ ಪರ 2025ರ ಜ.9ರಂದು ನೋಂದಾಯಿತ ರಿಲೀಸ್ ಡೀಡ್ ಮಾಡಿದ್ದರು. ನಂತರ 2025ರಲ್ಲಿ ಡೀಡ್ ನೋಂದಾಯಿಸಲಾಯಿತು. ಅದರ ಆಧಾರದ ಮೇಲೆ ಮಗಳ ಹೆಸರಿಗೆ ಕಂದಾಯ ದಾಖಲೆ ವರ್ಗಾವಣೆಗೊಂಡಿದ್ದವು.
ಆದರೆ, ಬೈರಪ್ಪ, ತಮ್ಮ ವಯಸ್ಸಿನ ದೌರ್ಬಲ್ಯ ದುರುಪಯೋಗಪಡಿಸಿಕೊಂಡು ದಾಖಲೆಗಳಿಗೆ ಸಹಿ ಪಡೆಯಲಾಗಿದೆ, ತಮ್ಮ ಜೀವನೋಪಾಯಕ್ಕಿದ್ದ ಆಸ್ತಿಯನ್ನು ಪಾಲನೆಯ ಷರತ್ತಿನ ಮೇಲೆ ವರ್ಗಾಯಿಸಲಾಗಿತ್ತು ಎಂದು ಆರೋಪಿಸಿ ಸೆಕ್ಷನ್ 23ರಡಿ ಉಪವಿಭಾಗಾಧಿಕಾರಿಗೆ ದೂರು ಸಲ್ಲಿಸಿ, ರಿಲೀಸ್ ಡೀಡ್ ರದ್ದು ಕೋರಿದ್ದರು. ಬೈರಪ್ಪ ದೂರನ್ನು ಆಲಿಸಿದ ಎಸಿ, ಡೀಡ್ ರದ್ದುಗೊಳಿಸಿದ್ದರು. ಅದನ್ನು ಮಗಳು ಮತ್ತು ಅಳಿಯ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.






