ಸಾಮಾಜಿಕ

ಮೊದಲ ರಾತ್ರಿಯೇ ಗಂಡನಿಗೆ ನಿದ್ದೆ ಮಾತ್ರೆ ಬೆರೆಸಿದ ಹಾಲು ಕೊಟ್ಟು ಚಿನ್ನ-ನಗದು ದೋಚಿ ಓಡಿಹೋದ ನವವಧು!

Views: 19

ಕನ್ನಡ ಕರಾವಳಿ ಸುದ್ದಿ: ಮೊದಲ ರಾತ್ರಿಯಂದೇ ಗಂಡನಿಗೆ ನಿದ್ದೆ ಮಾತ್ರೆ ಬೆರೆಸಿದ ಹಾಲು ನೀಡಿ, ಪ್ರಜ್ಞೆ ತಪ್ಪಿಸಿ ಮನೆಯಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾಳೆ.

ಬಂಧು-ಮಿತ್ರರ ಹಾರೈಕೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವವರನಿಗೆ ಈ ಘಟನೆ ತೀವ್ರ ಆಘಾತವನ್ನುಂಟುಮಾಡಿದೆ.

ಪೂರ್ವಯೋಜಿತ ಸಂಚಿನಂತೆ ನಡೆದ ಈ ಕೃತ್ಯದಲ್ಲಿ, ಮೊದಲ ರಾತ್ರಿಯ ಕೋಣೆಯಲ್ಲಿ ಗಂಡನಿಗೆ ಪ್ರೀತಿಯಿಂದ ಹಾಲು ನೀಡುವಂತೆ ನಟಿಸಿದ ವಧು, ಹಾಲಿನಲ್ಲಿ ಪ್ರಜ್ಞೆ ತಪ್ಪಿಸುವ ನಿದ್ದೆ ಮಾತ್ರೆಗಳನ್ನು ಬೆರೆಸಿದ್ದಳು. ಅಮಲಿನ ತೀವ್ರತೆಗೆ ತಾಳಲಾರದೆ ನವವರ ಕೆಲವೇ ನಿಮಿಷಗಳಲ್ಲಿ ಮಂಚದ ಮೇಲೆ ಕುಸಿದುಬಿದ್ದಿದ್ದಾನೆ. ಪತಿ ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡಿರುವುದನ್ನು ಖಚಿತಪಡಿಸಿಕೊಂಡ ಕಿಲಾಡಿ ವಧು, ಮನೆಯಲ್ಲಿದ್ದ ಬೆಲೆಬಾಳುವ ಚಿನ್ನಾಭರಣಗಳು, ವಜ್ರಗಳು ಹಾಗೂ ಲಕ್ಷಾಂತರ ರೂಪಾಯಿ ನಗದನ್ನು ದೋಚಿ ಮಧ್ಯರಾತ್ರಿಯೇ ಪರಾರಿಯಾಗಿದ್ದಾಳೆ.

ಮರುದಿನ ಬೆಳಗ್ಗೆ ಅಮಲು ಇಳಿದು ಎಚ್ಚರಗೊಂಡ ವರ, ಭಯದಿಂದಲೇ ಕೋಣೆಯಿಂದ ಹೊರಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಹೆಂಡತಿಯೂ ಕಾಣಿಸದೆ, ಇಟ್ಟಿದ್ದ ಒಡವೆ ಹಾಗೂ ನಗದು ಮಾಯವಾಗಿರುವುದನ್ನು ಕಂಡ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಘಟನೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದ್ದು, ನಕಲಿ ಮದುವೆಯ ಜಾಲ ನಡೆಸುತ್ತಿರುವ ಈ ಖತರ್ನಾಕ್ ಮಹಿಳೆ ಹಾಗೂ ಆಕೆಯ ಹಿಂದಿರುವ ಗ್ಯಾಂಗ್‌ಗಾಗಿ ಮಹಾರಾಷ್ಟ್ರದ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Related Articles

Back to top button
error: Content is protected !!