ಇತರೆ

ಬಲೂನ್ ಮಾರಾಟ ಮಾಡುವಾಗ ಪರಸ್ಪರ ಪ್ರೀತಿಸಿ ಮದುವೆ: ಅನೈತಿಕ ಸಂಬಂಧ ಶಂಕೆ..! ಪತ್ನಿಯ ಕೊಲೆ

Views: 48

ಕನ್ನಡ ಕರಾವಳಿ ಸುದ್ದಿ: ಪತ್ನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು, ಮೃತ ದೇಹವನ್ನು ರಾಜಕಾಲುವೆಗೆ ಎಸೆದಿದ್ದ ಆರೋಪಿ ಪತಿಯನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಮೊಹಮ್ಮದ್ ಇರ್ಫಾಜ್ (22) ಬಂಧಿತ. ಆರೋಪಿ ಅ.10ರಂದು ತನ್ನ ಪತ್ನಿ ರುಕ್ಸಾನಾ(25)ಳನ್ನು ಹತ್ಯೆಗೈದು, ಮಾಗಡಿ ರಸ್ತೆಯ ರಾಜಕಾಲುವೆಯಲ್ಲಿ ಮೃತದೇಹ ಎಸೆದು ತಲೆಮರೆಸಿಕೊಂಡಿದ್ದ.

ಅ.13ರಂದು ರಾಜಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತ್ನಿಯನ್ನು ಹತ್ಯೆಗೈದಿರುವುದಾಗಿ ಆರೋಪಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಮೊಹಮ್ಮದ್ ಇರ್ಫಾಜ್ ಮತ್ತು ರುಕ್ಸಾನಾ ಎರಡು ವರ್ಷಗಳ ಹಿಂದೆ ಬಿಹಾರದಲ್ಲಿ ಬಲೂನ್ ಮಾರಾಟ ಮಾಡುವಾಗ ಪರಿಚಯವಾಗಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆರು ತಿಂಗಳ ಹಿಂದೆ ಮಾಗಡಿ ರಸ್ತೆಯ ಗೋಪಾಲಪುರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ರುಕ್ಸಾನಾ ಹೆಚ್ಚು ಫೋನ್‌ನಲ್ಲಿ ಯಾರೊಂದಿಗೂ ಮಾತನಾಡುತ್ತಿದ್ದರು. ಅದರಿಂದ ಅನುಮಾನಗೊಂಡ ಆರೋಪಿ, ನೀನು ಯಾರೊಂದಿಗೂ ಅಕ್ರಮ ಸಂಬಂಧ ಹೊಂದಿರುವೆ ಎಂದು ಅನುಮಾನಿಸಿ ಪದೇ ಪದೇ ಜಗಳ ಮಾಡುತ್ತಿದ್ದ.

ದಂಪತಿ ನಡುವೆ ಜೋರಾಗಿ ಗಲಾಟೆ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಆರೋಪಿ, ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ನಂತರ ಆರೋಪಿ ಆಕೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು ಪರಾರಿಯಾಗಿದ್ದ.

ಪತ್ನಿ ಹತ್ಯೆಗೈದ ಬಳಿಕ ಆರೋಪಿ, ಪತ್ನಿಯ ಬಾಯಿಗೆ ವೇಲ್ ತುರುಕಿ, ಪ್ಲಾಸ್ಟಿಕ್ ಚೀಲದಲ್ಲಿ ಶವ ತುಂಬಿದ್ದಾನೆ. ನಂತರ ಮನೆ ಸಮೀಪದಲ್ಲೇ ದ್ವಿಚಕ್ರವಾಹನವೊಂದನ್ನು ಕಳವು ಮಾಡಿ, ಅದರಲ್ಲಿ ಮೃತದೇಹವನ್ನು ಹೊತ್ತೊಯ್ದು ರಾಜಕಾಲುವೆಯಲ್ಲಿ ಎಸೆದು ಬಂದಿದ್ದಾನೆ. ಅ.13ರಂದು ಶವ ಪತ್ತೆ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರೂ ಆರಂಭಿಕ ಹಂತದಲ್ಲೂ ಮೃತಳ ಗುರುತು ಪತ್ತೆಯಾಗಿರಲಿಲ್ಲ.

ಪ್ರಕರಣ ಸಂಬಂಧ ವಿಶೇಷ ತಂಡ ರಚಿಸಲಾಗಿತ್ತು. ಈ ವೇಳೆ ಪೊಲೀಸರು ತಮ್ಮ ಠಾಣೆ ವ್ಯಾಪ್ತಿಯಲ್ಲಿ ಮನೆ-ಮನೆ ಪೊಲೀಸ್ ಕಾರ್ಯಕ್ರಮ ನಡೆಸಿದಂತೆ, ಈ ಪ್ರಕರಣದಲ್ಲೂ ಗೋಪಾಲಪುರದಲ್ಲಿ ಮನೆ-ಮನೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ನಿವಾಸಿಯೊಬ್ಬರ ಪತ್ನಿ ಕೆಲ ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದರು. ಅದರಿಂದ ಅನುಮಾನಗೊಂಡ ಪೊಲೀಸರು, ಕೂಡಲೇ ಆ ಮನೆ ಪತ್ತೆ ಹಚ್ಚಿ ಮಾಲೀಕರನ್ನು ವಿಚಾರಣೆ ನಡೆಸಿದ್ದಾಗ, ಮೊಹಮ್ಮದ್ ಇರ್ಫಾಜ್ ಪತ್ನಿ ಕೆಲ ದಿನಗಳಿಂದ ಕಾಣಿಸಿಲ್ಲ. ಆತನಿಗೆ ಕೇಳಿದಾಗ ಊರಿಗೆ ತೆರಳಿದ್ದಾರೆ ಎಂದು ಹೇಳಿದ್ದ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹೆಂಡತಿಯನ್ನು ಬಿಹಾರಕ್ಕೆ ಕಳುಹಿಸಿದ್ದೇನೆ ಎಂದಿದ್ದ. ಪತ್ನಿ ನಂಬರ್ ನೀಡುವಂತೆ ಕೇಳಿದಾಗ, ಆಕೆಯ ಮೊಬೈಲ್ ಬಳಸುವುದಿಲ್ಲ ಎಂದು ಸುಳ್ಳು ಹೇಳಿದ್ದ. ಅನುಮಾನಗೊಂಡ ಪೊಲೀಸರು ಠಾಣೆಗೆ ಕರೆದೊಯ್ದು ತೀವ್ರವಾಗಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

Related Articles

Back to top button
error: Content is protected !!