ಎಸ್ಎಸ್ಎಲ್ಸಿ, ಪಿಯುಸಿ ವಾರ್ಷಿಕ ಪಬ್ಲಿಕ್ ಪರೀಕ್ಷೆ ಮುಂದೂಡಿಕೆ?
Views: 22
ಕನ್ನಡ ಕರಾವಳಿ ಸುದ್ದಿ: ಜನಗಣತಿ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 2027ನೇ ಸಾಲಿನ ಎಸ್ ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪಬ್ಲಿಕ್ ಪರೀಕ್ಷೆಗಳ ವೇಳಾಪಟ್ಟಿ ಬದಲಾಗುವ ಸಾಧ್ಯತೆ ಇದೆ.
ಪರೀಕ್ಷೆಗಳ ಸಂದರ್ಭದಲ್ಲಿ ಶಿಕ್ಷಕರನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸುವುದರಿಂದ ಪರಿಕ್ಷಾ ನಿರ್ವಹಣೆಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಪರೀಕ್ಷೆಗಳನ್ನು ಮುಂದೂಡುವಂತೆ ಕೇಂದ್ರ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯವು ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದೆ.
ಕೇಂದ್ರ ಸರಕಾರದ ಯೋಜನೆಯಂತೆ ಜನಗಣತಿಯ ಎರಡನೇ ಹಂತದ ಕಾರ್ಯಾಚರಣೆ ಜನವರಿ 25ರಿಂದ ಫೆಬ್ರವರಿ 28ರವರೆಗೆ ನಡೆಯಲಿದೆ. ಬಳಿಕ ಮಾರ್ಚ್ 1ರಿಂದ 5ರವರೆಗೆ ಪರಿಷ್ಕರಣಾ ಕಾರ್ಯ ನಡೆಯಲಿದೆ. ಈ ಅವಧಿಯು ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ಎಲ್ಸಿ ಪರೀಕ್ಷೆಗಳ ಸಿದ್ದತೆ ಮತ್ತು ನಿರ್ವಹಣೆಯ ಸಮಯಕ್ಕೆ ಹೊಂದಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಶಿಕ್ಷಕರ ಲಭ್ಯತೆ, ಪರೀಕ್ಷಾ ಕೇಂದ್ರಗಳ ನಿರ್ವಹಣೆ ಹಾಗೂ ಪರೀಕ್ಷಾ ಪ್ರಕ್ರಿಯೆಗೆ ಯಾವುದೇ ಅಡಚಣೆಯಾಗದಂತೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ.
ಈಗಾಗಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2017ನೇ ಸಾಲಿನ ಎಸ್ಎಸ್ಎಲ್ಸಿ ಪಿಯುಸಿ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಅದರಂತೆ, ಎಸ್ಎಸ್ಎಲ್ಸಿ ಪರೀಕ್ಷೆ-1 ಮಾರ್ಚ್ 22ರಿಂದ ಏಪ್ರಿಲ್ 5ರವರೆಗೆ ಹಾಗೂ ಪರೀಕ್ಷೆ-2 ಮೇ 24ರಿಂದ 31ರವರೆಗೆ ನಡೆಯಬೇಕಿದೆ. ಇನ್ನು ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 27ರಿಂದ ಮಾರ್ಚ್ 17ರವರೆಗೆ ಮತ್ತು ಪರೀಕ್ಷೆ-2 ಮೇ 3ರಿಂದ 15ರವರೆಗೆ ನಿಗದಿಯಾಗಿದೆ.






