ಶಿಕ್ಷಣ

ವಿಜ್ಞಾನ ವಿಚಾರಗೋಷ್ಠಿ: ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮದರ್ ತೆರೇಸಾ ಸ್ಕೂಲ್‌ನ ಸಮನ್ವಿ ಶೆಟ್ಟಿ

Views: 3

ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ, ಆಯುಕ್ತರ ಕಚೇರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರ ವತಿಯಿಂದ 2026–27ನೇ ಸಾಲಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಕುಂದಾಪುರ ತಾಲೂಕು ಮಟ್ಟದ ವಿಜ್ಞಾನ ವಿಚಾರಗೋಷ್ಠಿಯು ಕರ್ನಾಟಕ ಪಬ್ಲಿಕ್ ಸ್ಕೂಲ್, ಬಸ್ರೂರು ಇಲ್ಲಿ ನಡೆಯಿತು. ಈ ವಿಚಾರಗೋಷ್ಠಿಯಲ್ಲಿ ಶಂಕರನಾರಾಯಣದ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್‌ನ 9ನೇ ತರಗತಿಯ ವಿದ್ಯಾರ್ಥಿನಿ ಸಮನ್ವಿ ಶೆಟ್ಟಿ ಅವರು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು, ವಿಜ್ಞಾನ ವಿಷಯದ ಕುರಿತು ಆಸಕ್ತಿ ಮೂಡಿಸುವುದು ಹಾಗೂ ಸಂಶೋಧನಾ ಚಿಂತನೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿತ್ತು.

“ಭಾರತದ ಇಂಧನದ ವಿವಿಧ ರೀತಿಯ ಮಿಶ್ರಣ 2047: ಅವಕಾಶಗಳು ಮತ್ತು ಸವಾಲುಗಳು” ಎಂಬ ವಿಷಯದ ಕುರಿತು ಸಮನ್ವಿ ಶೆಟ್ಟಿ ಅವರು ಪರಿಣಾಮಕಾರಿಯಾಗಿ ವಿಚಾರ ಮಂಡಿಸಿ ಪ್ರಥಮ ಸ್ಥಾನ ಗಳಿಸಿರುವುದು ಶಾಲೆಗೆ ಹೆಮ್ಮೆಯ ಸಂಗತಿಯಾಗಿದೆ. ಈ ಸಾಧನೆಗೆ ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕರಾದ ಶ್ರೀಯುತ ಸುಮಂತ್ ಅವರು ವಿದ್ಯಾರ್ಥಿನಿಗೆ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ್ದರು.

ವಿದ್ಯಾರ್ಥಿನಿಯ ಈ ಗಮನಾರ್ಹ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಿ ಶಾಲೆಗೆ ಮತ್ತಷ್ಟು ಕೀರ್ತಿ ತಂದುಕೊಡಲಿ ಎಂದು ಶುಭ ಹಾರೈಸಿದ್ದಾರೆ.

Related Articles

Back to top button
error: Content is protected !!