ಧಾರ್ಮಿಕ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಲೈಟ್ ಸೆಟ್ ಉರುಳಿ ಬಿದ್ದು ಅವಘಡ

Views: 94

ಕನ್ನಡ ಕರಾವಳಿ ಸುದ್ದಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಅವಘಡ ಸಂಭವಿಸಿದೆ. ದೇವಸ್ಥಾನದ ಎದುರಿನ ವಾಣಿಜ್ಯ ಸಂಕೀರ್ಣದ ಮೇಲೆ ಅಳವಡಿಸಲಾಗಿದ್ದ ಬೃಹತ್ ಅಲಂಕಾರಿಕ ಲೈಟ್ ಸೆಟ್ ಗಾಳಿಯ ರಭಸಕ್ಕೆ ಉರುಳಿ ಭಕ್ತರ ಮೇಲೆ ಬಿದ್ದಿದೆ. ಘಟನೆಯಲ್ಲಿ ವಯೋವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರು ಭಕ್ತರಿಗೆ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ.

ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂಭಾಗದ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ ಬೃಹತ್ ಗಾತ್ರದ ಅಲಂಕಾರಿಕ ಲೈಟ್ ಸೆಟ್‌ಗಳನ್ನು ಅಳವಡಿಸಲಾಗಿತ್ತು. ಬುಧವಾರ ಏಕಾಏಕಿ ಬಲವಾದ ಗಾಳಿ ಬೀಸಿದ ಪರಿಣಾಮ ಲೈಟ್ ಸೆಟ್ ಕಟ್ಟಡದ ಮೇಲಿನಿಂದ ಕೆಳಕ್ಕೆ ಉರುಳಿದೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಕಟ್ಟಡದ ನೆರಳಿನಲ್ಲಿ ನಿಂತಿದ್ದ ಭಕ್ತರ ಮೇಲೆ ಲೈಟ್ ಸೆಟ್ ಬಿದ್ದಿದೆ. ಈ ವೇಳೆ ಕೆಲವರು ತಕ್ಷಣವೇ ಅಲ್ಲಿಂದ ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಆದರೆ, ಮೂವರು ಭಕ್ತರ ಮೇಲೆ ಲೈಟ್ ಸೆಟ್ ಬಿದ್ದ ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಅವಘಡದಲ್ಲಿ ವಯೋವೃದ್ಧ ಭಕ್ತರೊಬ್ಬರ ತಲೆಯ ಮೇಲೆ ಲೈಟ್ ಸೆಟ್ ಬಿದ್ದಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡು ಒದ್ದಾಡುತ್ತಿದ್ದ ವೃದ್ಧರ ನೆರವಿಗೆ ತಕ್ಷಣವೇ ಸಾರ್ವಜನಿಕರು ಧಾವಿಸಿದ್ದಾರೆ. ಬಳಿಕ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಕೊಲ್ಲೂರು ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿರುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

 

Related Articles

Back to top button
error: Content is protected !!