ಉಡುಪಿ, ಮಂಗಳೂರಿನಲ್ಲಿ ಅತ್ಯಂತ ಕೆಳಮಟ್ಟದಲ್ಲಿ ವಿಮಾನ ಹಾರಾಟ..ಹೌಹಾರಿದ ಜನ!
Views: 81
ಕನ್ನಡ ಕರಾವಳಿ ಸುದ್ದಿ: ಟಿವಿ, ಸೋಷಿಯಲ್ ಮೀಡಿಯಾಗಳಲ್ಲಿ ದ್ರೋಣ್ ದಾಳಿ, ಕ್ಷಿಪಣಿ ದಾಳಿ, ಯುದ್ಧ ವಿಮಾನಗಳ ಹಾರಾಟದ ದೃಶ್ಯಾವಳಿ ನೋಡುತ್ತಿದ್ದ ಜಾಗತಿಕ ಮಟ್ಟದಲ್ಲಿ ಯುದ್ಧಗಳು ದೊಡ್ಡ ಮಟ್ಟದ ಸುದ್ದಿಯಾಗುತ್ತಿರುವ ಹಿನ್ನೆಲೆಯಲ್ಲಿಯೇ ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನತೆ ಇದ್ದಕ್ಕಿದ್ದಂತೆಯೇ ತಮ್ಮ ತಲೆ ಮೇಲೆ ಅತ್ಯಂತ ಕೆಳಮಟ್ಟದಲ್ಲಿ ವಿಮಾನವೊಂದು ಹಾರಾಟ ನಡೆಸುತ್ತಿರುವುದನ್ನು ಕಂಡು ಮಂಗಳವಾರ ಹೌಹಾರಿದ್ದಾರೆ!
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಗದ್ದೆಯ ಮೇಲ್ಭಾಗದಲ್ಲಿ ಅತ್ಯಂತ ತಳಮಟ್ಟದಲ್ಲಿ ವಿಮಾನ ಹಾರಾಡುತ್ತಿರುವುದನ್ನು ಕಂಡು ಜನರು ಬೆಚ್ಚಿಬಿದ್ದರು.
ಕೋಟ ಸೈಬರ್ ಕಟ್ಟೆ, ಸಾಲಿಗ್ರಾಮ, ಸಾಸ್ತಾನ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಲಘು ವಿಮಾನವೊಂದು ನಿರಂತರ ಹಾರಾಟ ನಡೆಸುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕ್ಷಣಕಾಲ ಆತಂಕಗೊಂಡ ಮಂದಿ ಇದ್ದ ಬದ್ದವರಿಗೆಲ್ಲಾ ಫೋನಾಯಿಸಲು ಆರಂಭಿಸಿದರು. ಪರಸ್ಪರ ಚರ್ಚೆ ಶುರುವಾಯಿತು. ಮನೆಯಲ್ಲಿದ್ದವರು ವಿಮಾನ ನೋಡಲು ಹೊರಗಡೆ ಓಡಿ ಬಂದರು.ಎಲ್ಲಾ ಗಲಿಬಿಲಿ… ವಿವಿಧ ಭಾಗದಲ್ಲಿ ನೆಲ ಮಟ್ಟಕ್ಕೆ ಅತೀ ಸಮೀಪದಲ್ಲಿ ವಿಮಾನ ಹಾರಾಡುತ್ತಿದ್ದ ದೃಶ್ಯವನ್ನು ಕಂಡು ಜನ ಒಂದು ಬಾರಿ ದಂಗಾಗಿ ಹೋದರು. ತಮ್ಮ ಮೊಬೈಲ್‌ಗಳಲ್ಲಿ ವೀಡಿಯೋ ಸೆರೆ ಹಿಡಿದರು. ಇದೇ ರೀತಿ ವಿಮಾನ ಸುಮಾರು 10ರಿಂದ 15 ಸುತ್ತು ಹಾರಾಟ ನಡೆಸಿತು. ವಿಮಾನ ಕೆಳ ಭಾಗದಲ್ಲಿ ಹಾರಾಟ ಮಾಡುತ್ತಿರುವ ವಿಚಾರವನ್ನು ಪೊಲೀಸರಿಗೆ, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಲುಪಿಸಲಾಯಿತು. ಎಲ್ಲೆಡೆಯೂ ವಿಮಾನ ಹಾರಾಟದ್ದೇ ಸುದ್ದಿ. ಕೊನೆಗೂ ಅಧಿಕಾರಿಗಳಿಂದ, ಪೊಲೀಸರು ಇದು ಯುದ್ಧ ಸಂಬಂಧಿ ವಿಮಾನ ಅಲ್ಲ, ಇದು ಭೂ ವಿಜ್ಞಾನಕ್ಕೆ ಸಂಬಂಧಿಸಿದ ಸರ್ವೇ ಕಾರ್ಯ ಮಾಡುತ್ತಿರುವ ವಿಮಾನ ಎಂದು ಸ್ಪಷ್ಟೀಕರಣ ನೀಡಿದ ಬಳಿಕ ಜನರು ನಿಟ್ಟುಸಿರಿಟ್ಟರು.






