ಕುಂದಾಪುರ: ಗುಂಡೇಟಿಗೆ ಬಲಿಯಾದ ಐವನ್ ಜೊತೆಗಿದ್ದ ಮಹಿಳೆ ಹೇಳಿದ್ದೇನು?
Views: 124
ಕನ್ನಡ ಕರಾವಳಿ ಸುದ್ದಿ: ಕುಂದಾಪುರದಲ್ಲಿ ನಡೆದ ಶೂಟೌಟ್ ಪ್ರಕರಣ ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ.ಹಣಕಾಸಿನ ವ್ಯವಹಾರಕ್ಕೆ ನಡೆದ ಕೊಲೆಯಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಕೊಲೆಯಾದ ಐವನ್ ಜೊತೆಯಲ್ಲಿದ್ದ ಮಹಿಳೆ ಹೇಳಿಕೆ ಪ್ರಕಾರ ಗುರುವಾರ ರಾತ್ರಿ ಸುಮಾರು 11.45ಕ್ಕೆ ಡೆರಿಕ್, ಐವನ್‌ಗೆ ಕರೆ ಮಾಡಿ ಬಾಕಿ ಹಣ ನೀಡುವಂತೆ ಒತ್ತಾಯಿಸಿದ್ದು, ಮಾತಿನ ಚಕಮಕಿ ತಾರಕಕ್ಕೇರಿದೆ. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಈ ವೇಳೆ ಡೆರಿಕ್, ಧಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ ಇಲ್ಲೇ ಸೆಟಲ್ ಮಾಡೋಣ’ ಎಂದು ಡೆರಿಕ್, ಐವಾನ್‌ಗೆ ಸವಾಲು ಹಾಕಿದ್ದ. ಚಾಲೆಂಜ್ ಸ್ವೀಕರಿಸಿದ ಐವಾನ್ ತನ್ನ ಕಾರಿನಲ್ಲಿ ಆಗಮಿಸಿ ಕುಂದಾಪುರದ ಹೋಲಿ ರೋಸರಿ ಚರ್ಚ್ ಎದುರು ನಿಲ್ಲಿಸಿದ್ದರು.
ಬೆಳಗಿನ ಜಾವ ಸುಮಾರು 1.30ಕ್ಕೆ ಕುಂದಾಪುರದ ಹೋಲಿ ರೋಜರಿ ಚರ್ಚ್ ಎದುರಿನ ಕಾಂಕ್ರೀಟ್ ರಸ್ತೆಯ ಲೊಕೇಶನ್ ಅನ್ನು ಡೆರಿಕ್ ಐವನ್‌ಗೆ ಕಳುಹಿಸಿದ್ದಾನೆ. ಸವಾಲು ಸ್ವೀಕರಿಸಿದ ಐವನ್ ತನ್ನ ಹೆಂಡತಿ ಎಂದು ಕರೆಯಿಸಿಕೊಳ್ಳುವ ಮಹಿಳೆಯೊಂದಿಗೆ ಕಾರಿನಲ್ಲಿ ಅಲ್ಲಿಗೆ ತೆರಳಿದಾಗ ಸುಮಾರು 3.15ರ ವೇಳೆಗೆ ರಸ್ತೆಯಲ್ಲಿ ಇಬ್ಬರ ಮುಖಾಮುಖಿಯಾಗಿದೆ. ಕೆಂಪು ಬಣ್ಣದ ಕಾರಿನಲ್ಲಿ ಬಂದಿದ್ದ ಡೆರಿಕ್, ಐವನ್ ಕಾರಿನ ಎದುರು ವಾಹನ ನಿಲ್ಲಿಸಿ ಮತ್ತೊಮ್ಮೆ ಬೆದರಿಕೆ ಹಾಕಿದ್ದಾನೆ.
ಐವಾನ್ ಕಾರಿನಿಂದ ಕೆಳಗಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತನ್ನ ಕಾರಿನಲ್ಲಿ ಬಂದಿಳಿದ ಆರೋಪಿ ಡೆರಿಕ್, ಏಕಾಏಕಿ ಪಿಸ್ತೂಲ್ ತೆಗೆದು ಐವಾನ್ ಅವರ ಸೊಂಟದ ಕೆಳಭಾಗಕ್ಕೆ ಗುಂಡು ಹಾರಿಸಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವದಿಂದಾಗಿ ಐವಾನ್ ಅವರು ರಕ್ತದ ಮಡುವಿನಲ್ಲಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ. ಕೃತ್ಯ ಎಸಗಿದ ಬಳಿಕ ಡೆರಿಕ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದಿದ್ದಾರೆ.






