ಉಡುಪಿ ಜಿಲ್ಲೆಯ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 63,331 ಮತದಾರರ ಹೆಸರು ಡಿಲೀಟ್
Views: 0
ಕನ್ನಡ ಕರಾವಳಿ ಸುದ್ದಿ: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಉಡುಪಿ ಜಿಲ್ಲೆಯಲ್ಲಿ ನಡೆದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು,
ಜಿಲ್ಲೆಯ 10,63,876 ಮತದಾರರಲ್ಲಿ 63,331 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸರಿಯಾದ ದಾಖಲೆ ನೀಡಿದ, ಹೆಸರು ಹೊಂದಾಣಿಕೆಯಾದ 97,706 ಮತದಾರರಿಗೆ ನೋಟೀಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 63,331ಮಂದಿ ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ ಬೈಂದೂರಿನಲ್ಲಿ 14,280, ಕುಂದಾಪುರದಲ್ಲಿ 11,634, ಉಡುಪಿಯಲ್ಲಿ 17,726, ಕಾಪುವಿನಲ್ಲಿ 10,034 ಹಾಗೂ ಕಾರ್ಕಳದಲ್ಲಿ 9,657 ಮಂದಿಯನ್ನು ಗುರುತಿಸಲಾಗಿದೆ. 63,331 ಮಂದಿಯಲ್ಲಿ 4,145 ಮಂದಿ ಗೈರಾಗಿದ್ದರೆ, 29,36ಮಂದಿ ಸ್ಥಳಾಂತರ ಗೊಂಡಿದ್ದಾರೆ. 21,262 ಮಂದಿ ಮೃತರಾಗಿದ್ದರೆ, 8374 ಮಂದಿ ದ್ವಿಪ್ರತಿ ಹೊಂದಿದ್ದರು. ಉಳಿದ 189 ಮಂದಿ ಇತರ ವಿಭಾಗದಲ್ಲಿದ್ದಾರೆ. ಇವರು ಎಸ್‌ಐಆರ್‌ನ್ನು ನಿರಾಕರಿಸಿ ತಮ್ಮ ಮಾಹಿತಿಯನ್ನು ನೀಡದವರು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸೋಮವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಆಕ್ಷೇಪಣೆ ಸಲ್ಲಿಸಲು ಸೆ.23ರ ವರೆಗೂ ಅವಕಾಶವಿದೆ. ದಾಖಲೆ ನೀಡದ, ಹೆಸರು ಹೊಂದಾಣಿಕೆಯಾದ ಮತದಾರರ ಹೆಸರು ಕರಡು ಪಟ್ಟಿಯಲ್ಲಿದೆ. ಅವರಿಗೆ ಬಿಎಲ್‌ಒಗಳ ಮೂಲಕ ಮನೆಗೆ ನೋಟಿಸ್ ನೀಡಲಾಗುವುದು. ಆಧಾರ್ ಕಾರ್ಡ್ ಕಡ್ಡಾಯವಾಗಿ ನೀಡಬೇಕು. ಅದರ ಜತೆಗೆ ಚುನಾವಣ ಆಯೋಗ ಸೂಚಿಸಿದ 2 ದಾಖಲೆ ಒದಗಿಸಬೇಕು. ಬಿಎಲ್‌ಒಗಳಿಗೆ ನೀಡಿದರೆ ಅಲ್ಲಿಯೇ ಅಪ್ ಲೋಡ್ ಮಾಡಲಿದ್ದಾರೆ. ವಿಚಾರಣೆಗೆ ಎಲ್ಲ ವಿಧಾನಸಭಾ ಕ್ಷೇತ್ರವಾರು ಅಧಿಕಾರಿಗಳ ನೇಮಕ ಮಾಡಲಾಗಿದೆ. ವಿಚಾರಣೆಗೆ ಸಂಬಂಧಿ ಸಿದ ಮತದಾರರೇ ಖುದ್ದು ಹಾಜರಾಗಬೇಕು. ಇನ್ನೊಬ್ಬರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಅವಕಾಶವಿದೆ. ಒಮ್ಮೆ ದಾಖಲಾತಿ ನೀಡಲು ವಿಫಲವಾದರೆ ಇನ್ನೊಂದು ಅವಕಾಶವೂ ಇರಲಿದೆ. ಸರಿಯಾದ ದಾಖಲೆ ನೀಡದೇ ಇದ್ದರೆ ಅಂತಿಮ ಪಟ್ಟಿಯಲ್ಲಿ ಹೆಸರು ಇರುವುದಿಲ್ಲ ಎಂದರು.






