ಮಂಗಳೂರು:ಕಡಲಿನಿಂದ ದಡಕ್ಕೆ ಮರಳಿದ ಆಳ ಸಮುದ್ರ ಬೋಟ್ಗಳು, ರಾಶಿ ರಾಶಿ ಮೀನು!
Views: 66
ಕನ್ನಡ ಕರಾವಳಿ ಸುದ್ದಿ: ಆಳ ಸಮುದ್ರಕ್ಕೆ ಇಳಿದಿದ್ದ ಟ್ರಾಲ್ಬೋಟ್ಗಳು ಅಪಾರ ಪ್ರಮಾಣದ ವೈವಿಧ್ಯಮಯ ಮೀನುಗಳ ರಾಶಿಯೊಂದಿಗೆ ಬಂದರಿಗೆ ಮರಳುತ್ತಿದ್ದು, ಮೀನು ವ್ಯಾಪಾರಿಗಳು, ಕಾರ್ಮಿಕರು ಹಾಗೂ ಗ್ರಾಹಕರಿಂದ ದಕ್ಕೆ ಪ್ರದೇಶ ಜನಜಂಗುಳಿಯಿಂದ ಗಿಜಿಗುಡುತ್ತಿದೆ.

ವಾಡಿಕೆಯಂತೆ ಆಗಸ್ಟ್ 1 ರಿಂದಲೇ ಹೊಸ ಮೀನುಗಾರಿಕಾ ಋತು ಆರಂಭವಾಗಿದ್ದರೂ, ಆರಂಭದ 4-5 ದಿನಗಳ ಕಾಲ ಸಮುದ್ರದಲ್ಲಿ ಗಾಳಿ, ಮಳೆಯ ತೀವ್ರತೆ ಹಾಗೂ ಕಡಲ ಅಲೆಗಳ ಅಬ್ಬರ ಹೆಚ್ಚಾಗಿದ್ದ ಕಾರಣ ಮೀನುಗಾರರು ಕಡಲಿಗೆ ಇಳಿಯಲು ಸಾಧ್ಯವಾಗಿರಲಿಲ್ಲ. ಹವಾಮಾನ ಸುಧಾರಿಸುತ್ತಿದ್ದಂತೆಯೇ ಮಂಗಳೂರು ದಕ್ಕೆಯಿಂದ ಸುಮಾರು ಶೇ. 70 ರಿಂದ 80 ರಷ್ಟು ಆಳ ಸಮುದ್ರ ಟ್ರಾಲ್ಬೋಟ್ಗಳು ಮೀನುಗಾರಿಕೆಗೆ ತೆರಳಿದ್ದವು.
ಇದೀಗ 8 ರಿಂದ 10 ದಿನಗಳ ಕಾಲ ಕಡಲಲ್ಲಿದ್ದು ಮೀನುಗಾರಿಕೆ ನಡೆಸಿದ ಬೋಟ್ಗಳು ಒಂದೊಂದಾಗಿ ಬಂದರಿಗೆ ಲಂಗರು ಹಾಕುತ್ತಿದ್ದು, ಎಲ್ಲ ಬೋಟ್ಗಳಲ್ಲೂ ಉತ್ತಮ ಪ್ರಮಾಣದ ಮೀನುಗಳು ಲಭ್ಯವಾಗಿವೆ.

ಮದ್ಮಾಲ್ ಮೀನು, ಬೊಂಡಾಸ್ ಹಾಗೂ ಕಪ್ಪೆ ಬೊಂಡಾಸ್ (ಸ್ಕ್ವಿಡ್/ಕಟ್ಲ್ಫಿಶ್), ಬಂಗುಡೆ, ಅಂಜಲ್, ಪಾಪ್ಲೇಟ್/ ಮಾಂಜಿ, ಸಿಗಡಿ, ಮುರು ಮೀನು, ಡಿಸ್ಕೋ ಸೇರಿದಂತೆ ಹಲವು ತಳಿಯ ಮೀನುಗಳು ಬಂದರಿಗೆ ರಾಶಿ ರಾಶಿಯಾಗಿ ಬಂದಿಳಿದಿವೆ.
ಕಳೆದ ಎರಡು ತಿಂಗಳುಗಳಿಂದ ತಾಜಾ ಮೀನಿನ ಕೊರತೆ ಅನುಭವಿಸುತ್ತಿದ್ದ ಕರಾವಳಿಯ ಮೀನುಪ್ರಿಯರು ಬಂದರಿಗೆ ಲಗ್ಗೆಯಿಡುತ್ತಿದ್ದು, ವ್ಯಾಪಾರ-ವಹಿವಾಟು ಭರ್ಜರಿಯಾಗಿ ಸಾಗುತ್ತಿದೆ.
ರಜೆಯ ಬಳಿಕ ಮೀನುಗಾರಿಕೆ ಮರಳಿ ಗರಿಗೆದರಿರುವುದರಿಂದ ಕೇವಲ ಮೀನುಗಾರರಷ್ಟೇ ಅಲ್ಲದೆ, ಮೀನು ಸಾಗಾಟ ಲಾರಿ ಚಾಲಕರು, ಐಸ್ ಪ್ಲಾಂಟ್ ಕಾರ್ಮಿಕರು, ಬುಟ್ಟಿ ಹೊರುವ ಕಾರ್ಮಿಕರು ಹಾಗೂ ಸ್ಥಳೀಯ ಮಹಿಳಾ ಮೀನು ವ್ಯಾಪಾರಿಗಳ ಮುಖದಲ್ಲೂ ಮಂದಹಾಸ ಮೂಡಿದ್ದು, ಕರಾವಳಿಯ ಆರ್ಥಿಕತೆಗೆ ನವಚೈತನ್ಯ ತಂದಿದೆ.






