ಕರಾವಳಿ

ಕುಂದಾಪುರ: ಗಂಗೊಳ್ಳಿಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ, 27 ಮೀನುಗಾರರ ರಕ್ಷಣೆ

Views: 11

ಕನ್ನಡ ಕರಾವಳಿ ಸುದ್ದಿ: ಗಂಗೊಳ್ಳಿಯ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಆಳಸಮುದ್ರ ಬೋಟ್ ಬಂದರಿನಿಂದ ಸುಮಾರು 2-3 ನಾಟಿಕಲ್ ಮೈಲು ದೂರದ ಅರಬಿ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ 27 ಮಂದಿ ಮೀನುಗಾರರನ್ನು ಹತ್ತಿರದಲ್ಲಿದ್ದ ಬೋಟಿನವರು ಹಾಗೂ ಕರಾವಳಿ ಕಾವಲು ಪಡೆ ಪೊಲೀಸರ ತಂಡ ರಕ್ಷಿಸಿದ ಘಟನೆ ಬುಧವಾರ ಸಂಜೆ  ಸಂಭವಿಸಿದೆ. 50 ರಿಂದ 60 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಮರವಂತೆಯ ಗಣೇಶ್ ಆಚಾರ್‌ ಹಾಗೂ ನಾಗರಾಜ್ ಅವರ ಪಾಲುದಾರಿಕೆಯ ಶ್ರೀ ಬಾಲಾಂಜನೇಯ ಪರ್ಸಿನ್ ಬೋಟು ಗಂಗೊಳ್ಳಿ ಬಂದರಿನಿಂದ 2-3 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಿರತರವಾಗಿದ್ದ ವೇಳೆ ಫೈಬರ್ ತುಂಡಾಗಿ, ನೀರು ಒಳ ಬಂದು ಮುಳುಗಡೆಯಾಗಿದೆ. ಬೋಟ್ ಗಂಗೊಳ್ಳಿ ಬಂದರಿನಿಂದ ಬುಧವಾರ ಮಧ್ಯಾಹ್ನ ಮೀನುಗಾರಿಕೆಗೆ ಹೊರಟಿತ್ತು.

ಬೋಟಿನೊಳಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿ ಅಪಾಯದಲ್ಲಿದ್ದಾಗ ಕೂಡಲೇ ನೆರವಿಗೆ ಧಾವಿಸಿದ ಹತ್ತಿರದಲ್ಲಿದ್ದ ಮೀನುಗಾರಿಕಾ ನಿರತ ಬೋಟಿನವರು ರಕ್ಷಣ ಕಾರ್ಯದಲ್ಲಿ ಭಾಗಿಯಾದರು. ಇದೇ ವೇಳೆ ಗಂಗೊಳ್ಳಿಯ ಕರಾವಳಿ ಕಾವಲು ಪಡೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಕರಾವಳಿ ಕಾವಲು ರಕ್ಷಣಾ ಕಾರ್ಯಾಚರಣೆ  ತಂಡದವರು 2 ಬೋಟಿನಲ್ಲಿ ತೆರಳಿ ಸಂಕಷ್ಟದಲ್ಲಿದ್ದ 27 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಇನ್ ಸ್ಪೆಕ್ಟರ್ ರಮೇಶ್, ಎಸ್‌ಐ ಸುಬ್ರಹ್ಮಣ್ಯ, ಸಿಬಂದಿ ರಾಘವೇಂದ್ರ, ನಾಗರಾಜ್ ಖಾರ್ವಿ, ನಾಗೇಶ್, ರಮೇಶ್, ಕಿರಣ್, ಯುವರಾಜ್, ಕೆಎನ್‌ಡಿ ಸಿಬಂದಿ ಸಂದೇಶ್, ಸಂತೋಷ್ ಖಾರ್ವಿ, ಮೀನುಗಾರರಾದ ಸಂದೇಶ, ರಾಮ ಖಾರ್ವಿ, ಅಭಿ ಗಂಗೊಳ್ಳಿ, ಶೇಖರ್‌ಕುಂದರ್, ಚಂದ್ರಶೇಖರ ಖಾರ್ವಿ ಇನ್ನಿತರ ಮೀನುಗಾರರು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.

 

Related Articles

Back to top button
error: Content is protected !!