ಸ್ನೇಹಿತೆಯರೊಂದಿಗೆ ರೈಲ್ವೆ ಹಳಿಯ ಬಳಿ ರೀಲ್ಸ್: ರೈಲು ಡಿಕ್ಕಿಯಾಗಿ ಎರಡು ಕೈಗಳನ್ನು ಕಳೆದುಕೊಂಡ ಯುವತಿ!
Views: 18
ಕನ್ನಡ ಕರಾವಳಿ ಸುದ್ದಿ: 19 ವರ್ಷದ ಯುವತಿಯೊಬ್ಬಳು ರೈಲ್ವೆ ಹಳಿಯ ಬಳಿ ರೀಲ್ಸ್ ಮಾಡುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿದೆ. ಜಾರ್ಖಂಡ್‌ನ ಗರ್ಹ್ವಾ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದ್ದು, ಆಕೆಯ ಎರಡೂ ಕೈಗಳು ತುಂಡಾಗಿವೆ.
ನಗರ-ಉಂಟಾರಿ ರೈಲ್ವೆ ವಿಭಾಗದ ಬಳಿ ರಾಂಚಿ-ಚೋಪನ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದ ಪರಿಣಾಮ ಪೂರ್ಣಿಮಾ ಕುಮಾರಿ ತೀವ್ರ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಆಕೆಯ ಎರಡೂ ಕೈಗಳು ತುಂಡಾಗಿದ್ದು, ದೇಹದ ಇತರ ಭಾಗಗಳಿಗೂ ಗಾಯಗಳಾಗಿವೆ.
ಗರ್ಹ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅಶೋಕ್ ವಿಹಾರ್ ಪ್ರದೇಶದ ನಿವಾಸಿ ಧೀರಜ್ ಸಿಂಗ್ ಎಂಬವವರ ಪುತ್ರಿ ಪೂರ್ಣಿಮಾ, ಸ್ನೇಹಿತೆಯರೊಂದಿಗೆ ರೈಸಾದಲ್ಲಿ ರೈಲ್ವೆ ಮಾರ್ಗದ ಬಳಿ ಹೋಗಿದ್ದಳು. ಪೂರ್ಣಿಮಾ, ಗೆಳತಿಯರೊಂದಿಗೆ ರೀಲ್ಸ್ ಮಾಡುತ್ತಿದ್ದಳು. ಈ ವೇಳೆ ರಾಂಚಿ ಕಡೆಯಿಂದ ಬರುತ್ತಿದ್ದ ರೈಲಿನ ವೇಗ ಮತ್ತು ದೂರವನ್ನು ತಪ್ಪಾಗಿ ಊಹಿಸಿದ್ದಳು ಇದರಿಂದ ಡಿಕ್ಕಿ ಸಂಭವಿಸಿದೆ.
ಸ್ನೇಹಿತೆಯರು ತಕ್ಷಣ ಆಕೆಯನ್ನು ಗರ್ಹ್ವಾ ಸದರ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರು. ಆಕೆ ಗಂಭೀರ ಗಾಯಗೊಂಡಿದ್ದರಿಂದ ಉನ್ನತ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಆಕೆಯ ಕುಟುಂಬ ಸದಸ್ಯರು ಕೂಡ ಆಸ್ಪತ್ರೆಗೆ ತೆರಳಿದರು.
ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವುದಕ್ಕಾಗಿ ಜೀವವನ್ನೇ ಪಣಕ್ಕಿಡುವ ಅಪಾಯಗಳನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ. ರೈಲ್ವೆ ಹಳಿಗಳು, ನದಿಗಳು, ಜಲಪಾತಗಳು, ಬಹುಮಹಡಿ ಕಟ್ಟಡಗಳು ಮತ್ತು ಇತರ ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ ಮಾಡಲು ಹೋಗಿ ಜನರು ಅಪಾಯಕ್ಕೆ ಸಿಲುಕುತ್ತಿರುವುದು ಹೆಚ್ಚುತ್ತಿದೆ. ಆದರೂ ಕೂಡ ಎಚ್ಚೆತ್ತಂತೆ ತೋರುತ್ತಿಲ್ಲ.






