ಪ್ರಿಯಕರನನ್ನೇ ಅಪಹರಿಸಿ ಮನಬಂದಂತೆ ಹಲ್ಲೆ: ಪ್ರೇಯಸಿ ಸೇರಿ ಐವರ ಬಂಧನ
Views: 52
ಕನ್ನಡ ಕರಾವಳಿ ಸುದ್ದಿ:ಯುವತಿಯೊಬ್ಬಳು ತನ್ನ ಸಹಚರರ ಜೊತೆ ಸೇರಿ ಪ್ರಿಯಕರನನ್ನೇ ಅಪಹರಿಸಿ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರಿನಲ್ಲಿ ನಡೆದಿದೆ.
ತನ್ನ ಬಾಯ್‌ಫ್ರೆಂಡ್ ಅತಿಯಾಗಿ ಪೊಸೆಸಿವ್ ಆಗಿದ್ದು, ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂಬ ಕಾರಣಕ್ಕೆ 19 ವರ್ಷದ ಯುವತಿಯೊಬ್ಬಳು ಈ ಕೃತ್ಯಕ್ಕೆ ಸಂಚು ರೂಪಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಫಾನಾ ಸೇರಿದಂತೆ ಐವರನ್ನು ತಿರೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಟ್ಟಂಬಿಯ ಪಣಂಗಟ್ಟುತೊಡಿ ನಿವಾಸಿ ಸಫಾನಾ (19), ನದಿಯಾ (20), ರಬೀಬಾ (25), ಇರ್ಷಾದ್ (28) ಹಾಗೂ ಅಜರುದ್ದೀನ್ (25) ಎಂದು ಗುರುತಿಸಲಾಗಿದೆ.
ನ. 10ರಂದು ಮಧ್ಯರಾತ್ರಿ ಸಫಾನಾಳ 19 ವರ್ಷದ ಪ್ರಿಯತಮ ತನ್ನ ಸ್ನೇಹಿತನೊಂದಿಗೆ ತಿರೂರಿಗೆ ಬಂದಿದ್ದನು. ಈ ವೇಳೆ ಸಫಾನಾ ತನ್ನ ಸ್ನೇಹಿತೆ ನದಿಯಾಗೆ ಕರೆ ಮಾಡಿ, ತಿರೂರು ರೈಲು ನಿಲ್ದಾಣದ ಬಳಿ ಬಂದು ಯುವಕನನ್ನು ಭೇಟಿಯಾಗಿ ಬಳಿಕ ಅವರನ್ನು ಕರೆದುಕೊಂಡು ತನ್ನ ಬಳಿಗೆ ಬರುವಂತೆ ಸೂಚಿಸಿದ್ದಳು. ಅದರಂತೆ ನದಿಯಾ ತನ್ನ ಇಬ್ಬರು ಪುರುಷ ಸಹಚರರೊಂದಿಗೆ ರೈಲು ನಿಲ್ದಾಣಕ್ಕೆ ಆಗಮಿಸಿದ್ದಳು.
ಬಳಿಕ ಇಬ್ಬರು ಯುವಕರನ್ನು ತಾಝಪಾಲಂ ಬೈಪಾಸ್ ಕಡೆಗೆ ಕರೆದೊಯ್ದ ಆರೋಪಿಗಳು, ಅಲ್ಲಿ ಮೊದಲೇ ಸಿದ್ಧಪಡಿಸಿದ್ದ ಕಾರಿನೊಳಗೆ ಬಲವಂತವಾಗಿ ಹತ್ತಿಸಿಕೊಂಡಿದ್ದಾರೆ. ನಂತರ ಕಾರಿನಲ್ಲೇ ಇಬ್ಬರ ಮೇಲೂ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಸಫಾನಾಳ ಪ್ರಿಯತಮನನ್ನು ಬೆಳಗಿನ ಜಾವ ಸುಮಾರು 1.30ರ ವೇಳೆಗೆ ರಸ್ತೆ ಬದಿಯಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದರು.
ಹಲ್ಲೆಯಿಂದ ಕಂಗಾಲಾದ ಯುವಕನ ಸ್ನೇಹಿತ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ಪಡೆದ ತಿರೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಸಫಾನಾ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆ ವೇಳೆ ಸಫಾನಾ ನೀಡಿದ ಹೇಳಿಕೆ ಪೊಲೀಸರನ್ನೇ ಅಚ್ಚರಿಗೊಳಿಸಿದೆ. ತನ್ನ ಗೆಳೆಯ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಮತ್ತು ತನ್ನ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತಿದ್ದ. ಇದರಿಂದ ಬೇಸತ್ತು ಆತನಿಗೆ ಪಾಠ ಕಲಿಸಬೇಕೆಂದು ಸ್ನೇಹಿತರ ನೆರವಿನಿಂದ ಈ ದಾಳಿ ನಡೆಸಿರುವುದಾಗಿ ಆಕೆ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.






