ಇತರೆ

ಕುಂದಾಪುರ ಬೆಳ್ಳಂಬೆಳಿಗ್ಗೆ ಶೂಟೌಟ್ ಪ್ರಕರಣ:ಆರೋಪಿ ಡೆರಿಕ್ ಕ್ರಾಸ್ತಾ ಅರೆಸ್ಟ್ 

Views: 168

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಚರ್ಚ್‌ ರಸ್ತೆಯಲ್ಲಿ ಜುಲೈ.31 ಶುಕ್ರವಾರ ಬೆಳ್ಳಂಬೆಳಿಗ್ಗೆ ವೇಳೆ ನಡೆದ ಶೂಟೌಟ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಡುಪಿ ಜಿಲ್ಲಾ ಎಸ್ಪಿ ನೇತೃತ್ವದಲ್ಲಿ ರಚಿಸಿದ ಪೊಲೀಸರ ವಿಶೇಷ ತಂಡ ಬಂಧಿಸಿದೆ ಎಂದು ತಿಳಿದುಬಂದಿದೆ.

ಹೆಮ್ಮಾಡಿ ಸಮೀಪದ ಕನ್ನಡಕುದ್ರು ಮೂಲದ ಪ್ರಸ್ತುತ ಕುಂದಾಪುರದ ಫ್ಲ್ಯಾಟ್‌ವೊಂದರಲ್ಲಿ ವಾಸವಿರುವ ಡೆರಿಕ್ ಕ್ರಾಸ್ತಾ (55) ಬಂಧಿತ ಆರೋಪಿ.

ಹೆಬ್ರಿ ಮೂಲದ ಪ್ರಸ್ತುತ ಬಾರ್ಕೂರು ಕಚ್ಚೂರು ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಐವನ್ ರಿಚರ್ಡ್ ಮಸ್ಕರೇನಸ್ ಯಾನೆ ಮುನ್ನಾ (45) ಎನ್ನುವರನ್ನು ಗುಂಡಿಕ್ಕಿ ಹತ್ಯೆ ನಡೆಸಿದ ಆರೋಪಿ ಡೆರಿಕ್ ತಲೆಮರೆಸಿಕೊಂಡಿದ್ದ.

ಭಟ್ಕಳದ ಬೆಳಕೆ ಹೇರಬುಡಿಕೆ ಎಂಬಲ್ಲಿ ಶನಿವಾರ ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ತನಿಖೆ ಮುಂದುವರಿದಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಜುಲೈ 30ರಂದು ರಾತ್ರಿ 11:45ಕ್ಕೆ ಡೆರಿಕ್‌ ಎಂಬಾತ ಐವನ್‌ ರಿಚರ್ಡ್ ಅವರಿಗೆ ಕರೆ ಮಾಡಿ,ಚಟ್ಲಿ ವಿಚಾರದಲ್ಲಿ ಬಾಕಿ ಹಣ ವಸೂಲಿಗೆ ಮಧ್ಯಸ್ಥಿಕೆ ವಹಿಸುವ ಬಗ್ಗೆ ಮಾತನಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ಉಂಟಾಗಿದ್ದು, “ದಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ” ಎಂದು ಡೆರಿಕ್ ಸವಾಲು ಹಾಕಿದ್ದಾನೆ.ಅದರಂತೆ ಜುಲೈ 31ರಂದು ರಾತ್ರಿ 1:30ಕ್ಕೆ ಡೆರಿಕ್ ತನ್ನ ಲೊಕೇಶನ್ ಅನ್ನು ಐವನ್‌ಗೆ ಕಳುಹಿಸಿದ್ದಾನೆ.

ಬಳಿಕ ಚರ್ಚ್ ರಸ್ತೆಯ ಹೋಲಿ ರೋಸಾರಿಯೋ ಚರ್ಚ್ ಎದುರಿನ ಕಾಂಕ್ರೀಟ್ ರಸ್ತೆಯಲ್ಲಿ ಐವನ್ ಕಾರು ನಿಲ್ಲಿಸಿಕೊಂಡಿದ್ದ ವೇಳೆ, ಬೆಳಗಿನ ಜಾವ ಸುಮಾರು 3:15ಕ್ಕೆ ಕಪ್ಪು-ಕೆಂಪು ಬಣ್ಣದ ಥಾರ್ ಕಾರಿನಲ್ಲಿ ಬಂದ ಡೆರಿಕ್ ಕಾರಿನಿಂದ ಇಳಿದು, ಕೈಯಲ್ಲಿದ್ದ ಗನ್‌ನಿಂದ ಐವನ್‌ನ ಸೊಂಟದ ಕೆಳಭಾಗಕ್ಕೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದ.

ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಐವನ್ ಸ್ಥಳದಲ್ಲೇ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಹಣಕಾಸು ಹಾಗೂ ಇತರ ವ್ಯವಹಾರಗಳಿಗೆ ಸಂಬಂಧಿಸಿದ ಮನಸ್ತಾಪವೇ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಆರೋಪಿ ಡೆರಿಕ್ ಕ್ರಾಸ್ತಾ ಪತ್ತೆಗಾಗಿ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು.ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

 

 

 

 

 

Related Articles

Back to top button
error: Content is protected !!