ಕರಾವಳಿ

ಮೈಸೂರು ದಸರಾದಲ್ಲಿ ಕಂಬಳ ಕರಾವಳಿ ಭಾಗಕ್ಕೆ ಸೀಮಿತವಲ್ಲ :ದೇವಿ ಪ್ರಸಾದ್‌ ಶೆಟ್ಟಿ

Views: 30

ಕನ್ನಡ ಕರಾವಳಿ ಸುದ್ದಿ: ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ  ಆಯೋಜನೆ ಕುರಿತ ವಿವಾದ ತೀವ್ರವಾಗಿರುವ ಬೆನ್ನಲ್ಲೇ, ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಪ್ರತಿಕ್ರಿಯೆ ನೀಡಿ, ಕಂಬಳ ಕೇವಲ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗಕ್ಕೆ ಸೀಮಿತವಾದ ಕ್ರೀಡೆಯಲ್ಲ, ಇದು ಇಡೀ ಕರ್ನಾಟಕದ ಹೆಮ್ಮೆಯ ಪರಂಪರೆಯ ಕ್ರೀಡೆ ಎಂದು ಸ್ಪಷ್ಟಪಡಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ದೇವಿ ಪ್ರಸಾದ್‌ ಶೆಟ್ಟಿ, ಮೈಸೂರು ದಸರಾ ನಾಡಹಬ್ಬವಾಗಿದ್ದು, ರಾಜ್ಯದ ವಿವಿಧ ಭಾಗಗಳ ಕಲೆ-ಸಂಸ್ಕೃತಿಗಳಿಗೆ ವೇದಿಕೆ ನೀಡುವ ಉತ್ಸವವಾಗಿದೆ. ಇಂತಹ ಸಂದರ್ಭದಲ್ಲಿ ಕಂಬಳಕ್ಕೂ ಅವಕಾಶ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

ದೇವಿ ಪ್ರಸಾದ್‌ ಶೆಟ್ಟಿ ಅವರ ಪ್ರಕಾರ, ಕಂಬಳಕ್ಕೆ ಕರ್ನಾಟಕ ಸರ್ಕಾರ ಅಧಿಕೃತ ಕ್ರೀಡೆಯ ಮಾನ್ಯತೆ ನೀಡಿದ್ದು, ರಾಜ್ಯ ಕಂಬಳ ಅಸೋಸಿಯೇಷನ್ ಕೂಡ ಕಾರ್ಯನಿರ್ವಹಿಸುತ್ತಿದೆ. ಅಷ್ಟೇ ಅಲ್ಲ, ರಾಜ್ಯದ ಯಾವುದೇ ಭಾಗದಲ್ಲಿ ಕಂಬಳ ನಡೆಸಬಹುದು ಎಂದು ಹೈಕೋರ್ಟ್ ತೀರ್ಪು ನೀಡಿದೆ. ಆದ್ದರಿಂದ ಕಂಬಳವನ್ನು ಕರಾವಳಿ ಭಾಗಕ್ಕೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್‌ ಶೆಟ್ಟಿ ಕಂಬಳ ಯಾವುದೇ ಜಾತಿ, ಧರ್ಮ ಅಥವಾ ಪಕ್ಷಕ್ಕೆ ಸೀಮಿತವಲ್ಲ ಎಂದು ಹೇಳಿದ ದೇವಿ ಪ್ರಸಾದ್ ಶೆಟ್ಟಿ, ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದವರು ಸಮಾನವಾಗಿ ಕಂಬಳದಲ್ಲಿ ಭಾಗಿಯಾಗುತ್ತಾರೆ ಎಂದು ತಿಳಿಸಿದರು. ಬಡವರು, ರೈತರು, ಉದ್ಯಮಿಗಳು, ವಿವಿಧ ಸಂಘ-ಸಂಸ್ಥೆಗಳು ಎಲ್ಲರೂ ಸೇರಿ ಈ ಕ್ರೀಡೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕಂಬಳ ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸುವ ಕ್ರೀಡೆಯಾಗಿದೆ ಎಂದು ಅವರು ಹೇಳಿದರು.

ಮೈಸೂರು ದಸರಾದಲ್ಲಿ ಕಂಬಳ ನಡೆದರೆ ಸ್ಥಳೀಯ ಸಂಪ್ರದಾಯಗಳಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ ಎಂದು ಶೆಟ್ಟಿ ಸ್ಪಷ್ಟಪಡಿಸಿದರು. ಮೈಸೂರು ಮತ್ತು ಕರಾವಳಿ ಪ್ರದೇಶದ ಸಾಂಸ್ಕೃತಿಕ ಪರಂಪರೆ ಪರಸ್ಪರ ಸಂಬಂಧ ಹೊಂದಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿಯೇ ಕಂಬಳಕ್ಕೆ ಪ್ರೋತ್ಸಾಹ ನೀಡಲಾಗಿತ್ತು. ಬಾರ್ಕೂರು ಸಂಸ್ಥಾನ ಸೇರಿದಂತೆ ಹಲವು ಅರಮನೆಗಳ ಆಶ್ರಯದಲ್ಲೂ ಕಂಬಳ ನಡೆದಿರುವ ಇತಿಹಾಸವಿದೆ ಎಂದು ಅವರು ನೆನಪಿಸಿದರು.

ಕಂಬಳದಲ್ಲಿ ಪ್ರಾಣಿಗಳ ಶೋಷಣೆ ನಡೆಯುತ್ತದೆ ಎಂಬ ಆರೋಪಗಳನ್ನು ದೇವಿ ಪ್ರಸಾದ್ ಶೆಟ್ಟಿ ತಳ್ಳಿ ಹಾಕಿದರು. ಕಂಬಳದ ಕೋಣಗಳನ್ನು ಕುಟುಂಬದ ಸದಸ್ಯರಂತೆ, ಮಕ್ಕಳಿಗಿಂತಲೂ ಹೆಚ್ಚಿನ ಪ್ರೀತಿಯಿಂದ ಸಾಕಲಾಗುತ್ತದೆ. ವರ್ಷದಲ್ಲಿ ಸುಮಾರು 90 ದಿನ ಮಾತ್ರ ಕೋಣಗಳನ್ನು ಓಡಿಸಲಾಗುತ್ತದೆ. ಉಳಿದ ದಿನಗಳಲ್ಲಿ ಅವುಗಳಿಗೆ ವಿಶೇಷ ಆರೈಕೆ ನೀಡಲಾಗುತ್ತದೆ ಎಂದು ಹೇಳಿದರು. ಕಂಬಳ ಮಾಲೀಕರಿಗೆ ಯಾವುದೇ ಆರ್ಥಿಕ ಲಾಭ ಇಲ್ಲ. ಇದು ರೈತರ ಮತ್ತು ಗ್ರಾಮೀಣ ಸಮುದಾಯದ ಸಂಪ್ರದಾಯದ ಕ್ರೀಡೆಯಾಗಿದೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಯುವಕರು, ಉದ್ಯಮಿಗಳು ಹಾಗೂ ವಿವಿಧ ಸಂಘಟನೆಗಳು ಕಂಬಳದ ಬೆಳವಣಿಗೆಗೆ ಕೈಜೋಡಿಸಿದ್ದು, ಈ ಕ್ರೀಡೆಗೆ ಆಧುನಿಕ ಸ್ಪರ್ಶ ಸಿಕ್ಕಿದೆ ಎಂದು ದೇವಿ ಪ್ರಸಾದ್‌ ಶೆಟ್ಟಿ ಹೇಳಿದರು. ಪರಿಸರಕ್ಕೂ ಯಾವುದೇ ಹಾನಿಯಾಗದ ಈ ಕ್ರೀಡೆಯನ್ನು ದಾನಿಗಳ ಸಹಕಾರದಿಂದಲೂ ಯಶಸ್ವಿಯಾಗಿ ಆಯೋಜಿಸಬಹುದು ಎಂದು ಅಭಿಪ್ರಾಯಪಟ್ಟರು.

ಮೈಸೂರು ದಸರಾದಲ್ಲಿ ಕಂಬಳ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ‘ಇದು ಕರಾವಳಿಯ ಕ್ರೀಡೆ, ಅಲ್ಲಿ ಮಾತ್ರ ನಡೆಯಲಿ ಎನ್ನುವುದು ಸರಿಯಲ್ಲ’ ಎಂದು ದೇವಿ ಪ್ರಸಾದ್‌ ಶೆಟ್ಟಿ ಪರೋಕ್ಷವಾಗಿ ತಿರುಗೇಟು ನೀಡಿದರು. ಬೆಂಗಳೂರು ಅರಮನೆ ಮೈದಾನದಲ್ಲಿಯೂ ಈ ಹಿಂದೆ ಕಂಬಳ ಯಶಸ್ವಿಯಾಗಿ ನಡೆದಿದ್ದು, ಆಗಲೂ ಅರಮನೆ ಆಡಳಿತವೇ ಅವಕಾಶ ನೀಡಿತ್ತು ಎಂದು ಅವರು ನೆನಪಿಸಿದರು.

ಕಂಬಳವನ್ನು ವಿರೋಧಿಸುವವರು ಮೊದಲು ಅದರ ಇತಿಹಾಸ, ಸಂಸ್ಕೃತಿ ಮತ್ತು ರೈತರ ಬದುಕಿನೊಂದಿಗೆ ಇರುವ ನಂಟನ್ನು ತಿಳಿದುಕೊಳ್ಳಬೇಕು ಎಂದು ದೇವಿ ಪ್ರಸಾದ್ ಶೆಟ್ಟಿ ಹೇಳಿದರು. ರಾಜ್ಯದ ವಿವಿಧ ಭಾಗಗಳ ಕಲೆಗಳನ್ನು ಕರಾವಳಿಯ ಜನರು ಗೌರವಿಸುವಂತೆ, ಮೈಸೂರು ದಸರಾದಲ್ಲೂ ಕಂಬಳವನ್ನು ಸ್ವಾಗತಿಸಿ ನೋಡುವ ಮನೋಭಾವ ಇರಬೇಕು ಎಂದು ಅವರು ಮನವಿ ಮಾಡಿದರು.

Related Articles

Back to top button
error: Content is protected !!