ಇತರೆ

ಸ್ನಾನ ಮಾಡುವಾಗ ಏಕಾಏಕಿ ಮನೆಗೆ ನುಗ್ಗಿ ಮಹಿಳೆಗೆ ಕೊಡಲಿಯಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ

Views: 96

ಕನ್ನಡ ಕರಾವಳಿ ಸುದ್ದಿ: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಗೋಟಾ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮನೆಯೊಳಗೆ ಸ್ನಾನ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರ ಮೇಲೆ ಕೊಡಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಪ್ರಾಥಮಿಕ ತನಿಖೆಯಲ್ಲಿ ಜಮೀನು ಲೀಸ್‌ (ಲಾವಣಿ) ವಿಚಾರವೇ ಈ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಮೃತ ಮಹಿಳೆಯನ್ನ ಅನಿತಾ (32) ಎಂದು ಗುರುತಿಸಲಾಗಿದೆ.

ಭಾನುವಾರ ಬೆಳಗ್ಗೆ ಅವರು ಮನೆಯೊಳಗೆ ಸ್ನಾನ ಮಾಡುತ್ತಿದ್ದ ವೇಳೆ, ಪಕ್ಕದ ಮನೆಯ ನಿವಾಸಿ ಎಂದು ಹೇಳಲಾಗಿರುವ ಕೈಲಾಶ್ ವೈಜಿನಾಥ್ ಎಂಬಾತ ಏಕಾಏಕಿ ಮನೆಗೆ ನುಗ್ಗಿದ್ದಾನೆ ಎನ್ನಲಾಗಿದೆ. ಬಳಿಕ ತನ್ನೊಂದಿಗೆ ತಂದಿದ್ದ ಕೊಡಲಿಯಿಂದ ಮಹಿಳೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಹಲ್ಲೆಯ ತೀವ್ರತೆಗೆ ಮಹಿಳೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ವೇಳೆ ಮನೆಯಲ್ಲಿದ್ದವರು ಹಾಗೂ ನೆರೆಹೊರೆಯವರು ಕೂಗಾಟ ಕೇಳಿ ಸ್ಥಳಕ್ಕೆ ಧಾವಿಸಿದರೂ, ಅಷ್ಟರಲ್ಲೇ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಮತ್ತು ಮೃತ ಮಹಿಳೆಯ ಕುಟುಂಬದ ನಡುವೆ ಜಮೀನು ಲಾವಣಿ (ಲೀಸ್‌) ವಿಚಾರವಾಗಿ ಕೆಲವು ದಿನಗಳಿಂದ ಭಿನ್ನಾಭಿಪ್ರಾಯವಿತ್ತು ಎನ್ನಲಾಗಿದೆ. ಇದೇ ವೈಮನಸ್ಸು ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ನಿಖರ ಕಾರಣ ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಕೈಲಾಶ್ ವೈಜಿನಾಥ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡವನ್ನ ರಚಿಸಲಾಗಿದೆ.

Related Articles

Back to top button
error: Content is protected !!