ಹೆರಿಗೆಯಾಗಿದ್ದ ತಾಯಿ ತೀವ್ರ ರಕ್ತಸ್ರಾವದಿಂದ ಸಾವು: ವೈದ್ಯರ ನಿರ್ಲಕ್ಷ ಆರೋಪ
Views: 64
ಕನ್ನಡ ಕರಾವಳಿ ಸುದ್ದಿ: ತೀರ್ಥಹಳ್ಳಿಯ ಜಯ ಚಾಮರಾಜೇಂದ್ರ ತಾಲ್ಲೂಕು ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ತಾಯಿ ಶುಕ್ರವಾರ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ
ಹೊಸನಗರ ತಾಲ್ಲೂಕಿನ ಕೋಡೂರು ಸುಮಾ ಆರ್ (27) ಮೃತಪಟ್ಟ ತಾಯಿ.
ಅರಳಸುರಳಿಯ ತಾಯಿ ಮನೆಯಲ್ಲಿದ್ದ ಸುಮಾ ಜಾಂಡೀಸ್ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಜೆ.ಸಿ.ಆಸ್ಪತ್ರೆಗೆ ದಾಖಲಾಗಿದ್ದರು. ಜಾಂಡೀಸ್ಗೆ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಹೆರಿಗೆ ನೋವು ಕಾಣಿಸಿಕೊಂಡಿದೆ. ರಾತ್ರಿ 3 ಗಂಟೆಗೆ ಅವರಿಗೆ ಸಹಜವಾಗಿ ಹೆರಿಗೆಯಾಗಿದೆ. ಹೆರಿಗೆ ಸಂದರ್ಭದಲ್ಲಿ ಮಗು ಮಲವನ್ನು ತಿಂದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ವೈದ್ಯರು ಸೂಚಿಸಿದ್ದರು. ಅಷ್ಟರಲ್ಲಾಗಲೇ ತಾಯಿಗೂ ತೀವ್ರ ರಕ್ತಸ್ರಾವವಾಗಿದೆ. ವೈದ್ಯರು ಬೆಳಗ್ಗೆ 6 ಗಂಟೆಗೆ ಆಸ್ಪತ್ರೆಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತಾಯಿ ಮತ್ತು ಮಗುವನ್ನು ಕಳುಹಿಸಿಕೊಟ್ಟಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಬೆಳಗ್ಗಿನ ಜಾವ ವೈದ್ಯರು ಸರಿಯಾಗಿ ಪ್ರತಿಕ್ರಿಯಿಸದ ಹಿನ್ನಲೆಯಲ್ಲಿ ಕುಟುಂಬಸ್ಥರು ಮಗುವನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದ್ದು ತಾಯಿಯನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾರ್ಗ ಮಧ್ಯೆ ಸುಮಾರು 4 ರಿಂದ 5 ಗಂಟೆ ಪ್ರಯಾಣಿಸಿದ್ದರಿಂದ ತೀವ್ರ ರಕ್ತ ಸೋರಿಕೆಯಾಗಿತ್ತು. ಮಣಿಪಾಲ ಆಸ್ಪತ್ರೆಯಲ್ಲಿ ಹೆಚ್ಚಿನ ರಕ್ತವನ್ನು ನೀಡಿ ಚಿಕಿತ್ಸೆ ಮಾಡಲಾಗಿತ್ತು. ಆದರೆ ಅದರ ಪರಿಣಾಮವಾಗಿ ಎರಡು ಕಿಡ್ನಿ ಕೆಲಸ ಸ್ಥಗಿತಗೊಂಡಿದ್ದು ಡಯಾಲಿಸಿಸ್ಗೆ ಒಳಗಾಗಿದ್ದರು. ಅಲ್ಲದೇ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.






