ನೆರಮನೆಯ ಯುವಕನೊಂದಿಗೆ ತಾಯಿಯನ್ನು ನೋಡಿದ್ದಕ್ಕೆ ಮಗನ ದಾರುಣ ಅಂತ್ಯ!
Views: 0
ಕನ್ನಡ ಕರಾವಳಿ ಸುದ್ದಿ: ನೆರಮನೆಯ ಯುವಕನೊಂದಿಗೆ ಸೇರಿ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಮಗನನ್ನೇ ತಾಯಿಯೊಬ್ಬಳು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮೃತ ಬಾಲಕನನ್ನು ಸತ್ಯಮ್ (14) ಎಂದು ಗುರುತಿಸಲಾಗಿದೆ. ಬಾಲಕನ ತಂದೆ ಗುಜರಾತ್‌ನಲ್ಲಿ ಉದ್ಯೋಗದಲ್ಲಿದ್ದು, ಮನೆಯಲ್ಲಿ ತಾಯಿ ಹಾಗೂ ಮೂವರು ಮಕ್ಕಳಿದ್ದರು.
ತಾಯಿಗೆ ನೆರಮನೆಯ ಯುವಕನೊಂದಿಗೆ ಅನೈತಿಕ ಸಂಬಂಧವಿತ್ತು. ಹೀಗೆ ಬಾಲಕ ಸತ್ಯಮ್ ಸಂಜೆ ವೇಳೆ ಮನೆಗೆ ಬಂದಾಗ ತಾಯಿ ಆಕೆಯ ಪ್ರಿಯಕರನೊಂದಿಗೆ ಅಪವಿತ್ರ ಸ್ಥಿತಿಯಲ್ಲಿರುವುದನ್ನು ಕಣ್ಣಾರೆ ಕಂಡಿದ್ದು, ಈ ಸತ್ಯವನ್ನು ತಂದೆಗೆ ಮತ್ತು ಊರಿನವರಿಗೆ ತಿಳಿಸುತ್ತೇನೆಂದು ಹೇಳಿದ್ದಾನೆ.
ಎಲ್ಲಿ ತಮ್ಮ ಸತ್ಯ ಬಹಿರಂಗವಾಗುತ್ತದೆಯೋ ಎಂಬ ಭಯದಿಂದ ಆಕೆ ಪ್ರಿಯಕರನೊಂದಿಗೆ ಸೇರಿ ಬಾಲಕನ ಕೈ,ಕಾಲುಗಳನ್ನು ಹಿಡಿದು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ.
ಬಳಿಕ ಆತ ತೀವ್ರ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡು ಅಸ್ವಸ್ಥಗೊಂಡು ಮೃತಪಟ್ಟಿರುವುದಾಗಿ ಎಲ್ಲರನ್ನೂ ನಂಬಿಸಲು ಪ್ರಯತ್ನ ಪಟ್ಟಿದ್ದಾಳೆ. ಆದರೆ, ಬಾಲಕನ ಸಾವು ಊರಿನವರಿಗೆ ಮತ್ತು ಸಂಬಂಧಿಕರಿಗೆ ಅನುಮಾನ ಮೂಡಿಸಿದ್ದು, ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ವಿಧಿ ವಿಜ್ಞಾನ ತಂಡ ಮೃತದೇಹವನ್ನು ತಪಾಸಣೆ ನಡೆಸಿದಾಗ ಬಾಲಕನ ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿದ್ದು, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕ ಅನಾರೋಗ್ಯದಿಂದ ಮೃತಪಟ್ಟಿಲ್ಲ, ಬದಲಿಗೆ ಕುತ್ತಿಗೆ ಹಿಸುಕಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂಬುದು ತಿಳಿದು ಬಂದಿದೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.






