ಮಂಗಳೂರಿನಲ್ಲಿ 1.15 ಕೋಟಿ ಹವಾಲ ಹಣ ದರೋಡೆ ಆರೋಪ: ಕಾರವಾರದ ಕಾನ್ಸ್ಟೇಬಲ್ ಅರೆಸ್ಟ್
Views: 163
ಕನ್ನಡ ಕರಾವಳಿ ಸುದ್ದಿ: ದಾವಣಗೆರೆಯಿಂದ ಮಂಗಳೂರಿಗೆ ಸಾಗಿಸುತ್ತಿದ್ದ ಬರೋಬ್ಬರಿ 1.15 ಕೋಟಿ ರೂಪಾಯಿ ಹವಾಲ ಹಣವನ್ನು ಅಪಹರಣ ನಡೆಸಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಈ ಇಡೀ ದರೋಡೆ ಸಂಚಿನ ಹಿಂದೆ ಕಾರವಾರದ ಪೊಲೀಸ್ ಪೇದೆಯೊಬ್ಬರ ಕೈವಾಡವಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಸಂಚಾರ ಪೊಲೀಸ್ ಠಾಣೆಯ (ಟ್ರಾಫಿಕ್) ಪೇದೆ ಶ್ರೀಶೈಲ್ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ದಾವಣಗೆರೆಯಿಂದ ಸತ್ಯನಾರಾಯಣ ಎಂಬುವವರು 1.15 ಕೋಟಿ ರೂ. ಹವಾಲ ಹಣವನ್ನು ಮಂಗಳೂರಿಗೆ ತರುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದ್ದ ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯ ಪೇದೆ ಶ್ರೀಶೈಲ್, ಹಣ ದೋಚಲು ಸಂಚು ರೂಪಿಸಿದ್ದರು. ಅದರಂತೆ, ಕಾರವಾರದ ಕಿನ್ನರ ಗ್ರಾಮದ ಗಣೇಶ ಕೋಳಂಕರ್ ಎಂಬ ಯುವಕ ಹಾಗೂ ಇತರರನ್ನು ಬಳಸಿಕೊಂಡು ಮಂಗಳೂರಿನಲ್ಲಿ ಸತ್ಯನಾರಾಯಣ ಅವರನ್ನು ಅಪಹರಿಸಿ, ಅವರ ಬಳಿಯಿದ್ದ 1.15 ಕೋಟಿ ರೂ. ನಗದನ್ನು ದರೋಡೆ ಮಾಡಿಸಿದ್ದರು.
ಘಟನೆ ಬಳಿಕ ಸತ್ಯನಾರಾಯಣ ಅವರು ಮಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಮಂಗಳೂರು ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳ ಬೆನ್ನತ್ತಿದಾಗ, ಅಪಹರಣ ಹಾಗೂ ದರೋಡೆಯ ಹಿಂದೆ ಪೊಲೀಸ್ ಪೇದೆ ಶ್ರೀಶೈಲ್ ಅವರ ಸಂಚು ಇರುವುದು ಪತ್ತೆಯಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಮಂಗಳೂರು ಪೊಲೀಸರು ಪೇದೆ ಶ್ರೀಶೈಲ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.






