ಇತರೆ

ಮ್ಯಾಟ್ರಿಮೋನಿ ಮುಖಾಂತರ ಅವಿವಾಹಿತ ಮಹಿಳೆಯರ ಮನೆಗೆ ತೆರಳಿ ಚಿನ್ನಾಭರಣ ದೋಚುತ್ತಿದ್ದ ಖದೀಮನ ಬಂಧನ

Views: 14

ಕನ್ನಡ ಕರಾವಳಿ ಸುದ್ದಿ: ಅವಿವಾಹಿತ ಯವತಿಯರು, ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿ ಮ್ಯಾಟ್ರಿಮೋನಿ ಆ್ಯಪ್ ಮುಖಾಂತರ ಪರಿಚಯಿಸಿಕೊಂಡು ಅವರ ಮನೆಗಳಲ್ಲಿ ಚಿನ್ನಾಭರಣ ಕಳ್ಳತನ‌ ಮಾಡುತ್ತಿದ್ದ ಖತರ್ನಾಕ್ ಖದೀಮನನ್ನು ಚಿಕ್ಕ ಬಾಣಾವರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಲಿಂಗರಾಜ್ (30) ಬಂಧಿತ ಆರೋಪಿ. ಹಾವೇರಿ ಜಿಲ್ಲೆ ಬ್ಯಾಡಗಿ ಮೂಲದ ಈತ ಕೆಲ ವರ್ಷಗಳ ಹಿಂದೆ ವಿವಾಹವಾಗಿ ಪತ್ನಿಗೆ ವಿಚ್ಛೇದನ ನೀಡಿದ್ದ. ಬಿ.ಕಾಂ ವ್ಯಾಸಂಗ ಮಾಡಿ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ತೊರೆದು ಬಿಟಿಎಂ ಲೇಔಟ್ನಲ್ಲಿ ಒಂಟಿಯಾಗಿ ವಾಸವಾಗಿದ್ದ. ಸುಲಭ ಹಣ ಸಂಪಾದನೆಗಾಗಿ ಮಹಿಳೆಯರನ್ನು ವಂಚಿಸುವ ಕಲೆಯನ್ನು ಸಿದ್ಧಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮ್ಯಾಟ್ರಿಮೋನಿ, ಶಾದಿ.ಕಾಮ್‌ ಸೇರಿದಂತೆ ವಿವಿಧ ಆ್ಯಪ್ಗಳಲ್ಲಿ ಅವಿವಾಹಿತನ ಸೋಗಿನಲ್ಲಿ ಹೆಸರು ಹಾಗೂ ವಿವರಗಳನ್ನು ನಮೂದಿಸುತ್ತಿದ್ದ. ಮದುವೆಯಾಗದ ಯುವತಿಯರು ಹಾಗೂ ವಿಚ್ಛೇದಿತ ಮಹಿಳೆಯರಿಗೆ ಗಾಳ ಹಾಕುತ್ತಿದ್ದ. ಈತನ‌ ಪ್ರೊಫೈಲ್ ಕಂಡು ಸಂಪರ್ಕಿಸುತ್ತಿದ್ದ ಮಹಿಳೆಯರಿಗೆ ನಯವಾಗಿ ಮಾತನಾಡುತ್ತಿದ್ದ. ಈತನ ಬಣ್ಣದ ಮಾತನ್ನು ನಂಬಿ ಮಹಿಳೆಯರು ಮೊಬೈಲ್ ನಂಬರ್ ಕೊಡುತ್ತಿದ್ದರು. ಬಳಿಕ ಕರೆ ಮಾಡಿ ಮಾತನಾಡುವುದಲ್ಲದೇ ಹಾಗೂ ವಾಟ್ಸ್ಆ್ಯಪ್ ಮೂಲಕ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಪರಿಚಯವಾದ ಮೂರೇ‌ ದಿನದಲ್ಲಿ ಮಹಿಳೆಯರಿಗೆ ಆಶ್ಲೀಲ ವಿಡಿಯೋ ಕಳುಹಿಸುತ್ತಿದ್ದ. ಇದೇ ರೀತಿ ಚಿಕ್ಕಬಾಣಾವರದ ನಿವಾಸಿಯಾಗಿರುವ ಮಹಿಳಾ‌ ಪ್ರೊಫೆಸರ್ಗೆ ಕಳುಹಿಸಿದ್ದ. ಇದೇ ಸಲುಗೆಯಿಂದಲೇ ಮಹಿಳೆಯು ತನ್ನ ಮನೆಗೆ ಆಹ್ವಾನಿಸಿದ್ದಳು. ಆತ್ಮೀಯತೆ ಸೋಗಿನಲ್ಲಿ ಆರೋಪಿಯು ಆಕೆ ಮನೆಯಲ್ಲಿದ್ದ ಸುಮಾರು 100 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ. ಈ ಸಂಬಂಧ ಮಹಿಳೆ ನೀಡಿದ‌ ದೂರು ಆಧರಿಸಿ ಆರೋಪಿಯನ್ನು ಬಂಧಿಸಿ 10 ಲಕ್ಷ ಮೌಲ್ಯದ 79 ಗ್ರಾಂ ಚಿನ್ನ, ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿ ಆತನ ಮೊಬೈಲ್ ಜಾಲಾಡಿದಾಗ 8ರಿಂದ 10 ಮಹಿಳೆಯರಿಗೆ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಅವರೊಂದಿಗೆ ಲೈಂಗಿಕ ಸಂಬಂಧ ಹೊಂದಿ ವಂಚಿರುವುದು ತಿಳಿದುಬಂದಿದೆ. ಮೋಸಕ್ಕೆ‌ ಒಳಗಾದ ಮಹಿಳೆಯರ ಮನೆಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ ವಂಚನೆ ಬಗ್ಗೆ‌ ದೂರು ನೀಡುವಂತೆ ತಿಳಿಸಲಾಗಿದೆ. ಇನ್ಸ್ಪೆಕ್ಟರ್ ಆರ್‌‌.ಪಿ. ಅಶೋಕ್‌ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Related Articles

Back to top button
error: Content is protected !!