7 ಮಂದಿ ಹತ್ಯೆ ಪ್ರಕರಣ: ಶಿರಾಡಿ ಘಾಟ್ನಲ್ಲಿ ಮತ್ತೆ 2 ಶವ ಪತ್ತೆ
Views: 95
ಕನ್ನಡ ಕರಾವಳಿ ಸುದ್ದಿ: ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಶಿರಾಡಿ ಘಾಟ್ನಲ್ಲಿ ಮತ್ತೆ ಎರಡು ಮೃತದೇಹಗಳು ಪತ್ತೆಯಾಗಿದ್ದು, ಇದರೊಂದಿಗೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಎಲ್ಲಾ ಏಳು ಮಂದಿಯ ಮೃತದೇಹಗಳು ಪತ್ತೆಯಾದಂತಾಗಿದೆ.
ಪ್ರಕರಣದ ತನಿಖೆಗಾಗಿ ಆರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಶಿರಾಡಿ ಘಾಟ್ನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ.
ಇವು ಹತ್ಯೆಗೀಡಾದ ಶಂಕರ್ ಮತ್ತು ನಳಿನಿ ಅವರ ಮೃತದೇಹಗಳೆಂದು ಶಂಕಿಸಲಾಗಿದೆ. ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ರಾಜಾಜಿನಗರ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ತಂಡ ಬೆಂಗಳೂರಿನಿಂದ ಶಿರಾಡಿ ಘಾಟ್ಗೆ ತೆರಳಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಪತ್ತೆಯಾಗಿದ್ದ ದಿವ್ಯಾ ಮತ್ತು ಶಿವಕುಮಾರ್ ಅವರ ಮೃತದೇಹಗಳು, ಸೇಲಂನಲ್ಲಿ ಪತ್ತೆಯಾಗಿದ್ದ ರೂಪವತಿ ಮತ್ತು ಸುನೀತಾ ಅವರ ಮೃತದೇಹಗಳು ಹಾಗೂ ಶಿರಾಡಿ ಘಾಟ್ನಲ್ಲಿ ಇಂದು ಪತ್ತೆಯಾಗಿರುವ ಶಂಕರ್ ಮತ್ತು ನಳಿನಿ ಅವರ ಮೃತದೇಹಗಳನ್ನು ಪೊಲೀಸರು ಇಂದು ಕುಟುಂಬಸ್ಥರಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ. ಬಳಿಕ ಎಲ್ಲರ ಅಂತ್ಯಕ್ರಿಯೆಯನ್ನು ಒಂದೇ ಸ್ಥಳದಲ್ಲಿ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಇನ್ನು ಹತ್ಯೆಗೀಡಾಗಿದ್ದ ಬಾಲಕ ಪುನೀತ್ನ ಅಂತ್ಯಕ್ರಿಯೆಯನ್ನು ನವೆಂಬರ್ 7ರ ಶನಿವಾರ ರಾಜಾಜಿನಗರದ ಹರಿಶ್ಚಂದ್ರ ಘಾಟ್ನಲ್ಲಿ ನೆರವೇರಿಸಲಾಗಿತ್ತು.
ನಂದಿ ಬೆಟ್ಟದ ತಪ್ಪಲು (ಚಿಕ್ಕಬಳ್ಳಾಪುರ): 7 ವರ್ಷದ ಬಾಲಕ ಪುನೀತ್ ಮೃತದೇಹ.
ಸೇಲಂ ಅರಣ್ಯ ಪ್ರದೇಶ (ತಮಿಳುನಾಡು): ಆರೋಪಿಯ ಪತ್ನಿ ಸುನೀತಾ (40) ಮತ್ತು ಅತ್ತೆ ರೂಪಾವತಿ (65) ಅವರ ಶವಗಳು.
ಚಾಮುಂಡಿ ಬೆಟ್ಟದ ತಪ್ಪಲು (ಮೈಸೂರು): ಶಿವಕುಮಾರ್ (30) ಮತ್ತು ಆತನ ಪತ್ನಿ ದಿವ್ಯಾ (30) ಅವರ ಮೃತದೇಹಗಳು.
ಶಿರಾಡಿ ಘಾಟ್ (ಹಾಸನ/ದಕ್ಷಿಣ ಕನ್ನಡ ಗಡಿ): ಶಂಕರ್ ಮತ್ತು ನಳಿನಿ ಅವರ ಮೃತದೇಹಗಳು.






