ಕರಾವಳಿ

ಮಂಗಳೂರಿನಲ್ಲಿ ಭಾರೀ ಮಳೆ; ಕಂಕನಾಡಿಯಲ್ಲಿ ಮನೆ ಮೇಲೆ ಮಣ್ಣು ಕುಸಿದು ಮೂವರು ಸಾವು

Views: 59

ಕನ್ನಡ ಕರಾವಳಿ ಸುದ್ದಿ: ಕಳೆದ ವಾರದಿಂದ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಅನಾಹುತಗಳು ಸಂಭವಿಸಿದೆ. ಇದೀಗ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದ ನಾಗೋರಿಯಲ್ಲಿ ಭೀಕರ ಮಣ್ಣು ಕುಸಿತ ಸಂಭವಿಸಿದ್ದು, ಹಂಚಿನ ಮನೆಯೊಂದು ಮಣ್ಣಿನ ಅಡಿಯಲ್ಲಿ ಸಿಲುಕಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಇದರಿಂದ ನಾಲ್ವರು ಮಣ್ಣಿನಡಿ ಸಿಲುಕಿದ್ದರು. ಇವರಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ ಉಳಿದ ಮೂವರನ್ನು ರಕ್ಷಿಸಲಾಗಿದೆ. ಮಣ್ಣಿನ ತೆರವು ಕಾರ್ಯಾಚರಣೆ ಮುಂದುವರಿದಿದೆ

ಹಂಚಿನ ಮನೆಯೊಂದರ ಪಕ್ಕದಲ್ಲಿದ್ದ ಗುಡ್ಡ ಏಕಾಏಕಿ ಕುಸಿದು ಬಿದ್ದಿದೆ. ಮಣ್ಣಿನ ಭಾರಕ್ಕೆ ಮನೆ ಸಂಪೂರ್ಣ ಜಖಂಗೊಂಡಿದೆ. ಈ ಮನೆಯಲ್ಲಿ ಬೇರೆ ಬೇರೆ ಕುಟುಂಬ ಬಾಡಿಗೆ ಆಧಾರದಲ್ಲಿ ವಾಸವಿದ್ದರು. ಈ ಬಾಡಿಗೆ ಮನೆಯ ಒಳಗಿದ್ದ ವಿವಿಧ ಕುಟುಂಬದ ಆರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.

ಮಣ್ಣಿನ ಅಡಿಯಲ್ಲಿ ಸಿಲುಕಿದ್ದವರ ಪೈಕಿ ಒಬ್ಬ ಪುರುಷ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಗಾಯಗಳೊಂದಿಗೆ ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ತೀವ್ರವಾಗಿ ಮಣ್ಣು ಮುಚ್ಚಿಹೋಗಿದ್ದ ಒಬ್ಬ ಮಹಿಳೆ ಹಾಗೂ ಇಬ್ಬರು ಹೆಣ್ಣುಮಕ್ಕಳು ಅವಶೇಷಗಳ ಅಡಿಯಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಸತತ ಪ್ರಯತ್ನದ ಬಳಿಕ ಹೊರತೆಗೆಯಲಾಗಿದೆ.

ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಮತ್ತು ಎನ್.ಡಿ.ಆರ್.ಎಫ್ ಸಿಬ್ಬಂದಿ ಜಂಟಿಯಾಗಿ ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಿದರು. ಸದ್ಯ ಮಣ್ಣಿನ ಅಡಿಯಲ್ಲಿ ಸಿಲುಕಿದ್ದ ಎಲ್ಲರನ್ನೂ ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಮುಂದಿನ ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Related Articles

Back to top button
error: Content is protected !!