ಕುಂದಾಪುರ: ಹಿಗ್ಗಾಮುಗ್ಗಾ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಆರೋಪ, 8 ಮಂದಿ ವಿರುದ್ಧ ಪ್ರಕರಣ ದಾಖಲು
Views: 53
ಕನ್ನಡ ಕರಾವಳಿ ಸುದ್ದಿ: ಕುಟುಂಬದ ಗಲಾಟೆ ವಿಚಾರವಾಗಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಮುಂಡು ತಾಡಿನಹಕ್ಲು ಎಂಬಲ್ಲಿ ನಡೆದಿದೆ.
ಹಾರ್ಯಾಡಿ ಹೆಸ್ಕತ್ತೂರು ಗ್ರಾಮದ ದಿನೇಶ್ ಆಚಾರ್ (40) ಎಂಬವರು ನವೆಂಬರ್ 1ರಂದು ಬೆಳಗ್ಗೆ 7 ಗಂಟೆಗೆ ತಮ್ಮ ತಾಯಿಯನ್ನು ಕರೆದುಕೊಂಡು ಭಾವನಾದ ಚಂದ್ರ ಆಚಾರ್ ಅವರ ಮನೆಗೆ ತೆರಳಿದ್ದರು. ಈ ವೇಳೆ ಮನೆಯ ಅಂಗಳದಲ್ಲಿ ಗಣೇಶ, ಮಹೇಶ, ಕೃಷ್ಣ, ರಾಜು, ದಿನೇಶ ಹಾಗೂ ಇತರ ಮೂವರು ಸೇರಿ ವಾಹನವನ್ನು ಅಡ್ಡಗಟ್ಟಿ ಗಲಾಟೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದಿನೇಶ್ ಅವರು ವಾಹನದಿಂದ ಇಳಿಯುತ್ತಿದ್ದಂತೆ ಗಣೇಶ ಕೈಯನ್ನು ಹಿಂದಕ್ಕೆ ತಿರುಗಿಸಿ ಹಿಡಿದುಕೊಂಡಿದ್ದು, ಉಳಿದ ಆರೋಪಿಗಳು ಕೈಯಿಂದ ಹೊಡೆದು, ಕಾಲಿನಿಂದ ತುಳಿದು, ಕುತ್ತಿಗೆ ಒತ್ತಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯ ವೇಳೆ ದಿನೇಶ್ ಅವರ ಕನ್ನಡಕ ಒಡೆದಿದ್ದು, ಕುತ್ತಿಗೆಯಲ್ಲಿದ್ದ ಸುಮಾರು 10 ಗ್ರಾಂ ತೂಕದ ಚಿನ್ನದ ಸರ ಕಳೆದುಹೋಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಲಾಟೆಗೆ ನೀನೇ ಕಾರಣ ಎಂದು ಆರೋಪಿಗಳು ಹಲ್ಲೆ ನಡೆಸಿದ್ದು, ಗಣೇಶ ಎಂಬಾತ “ನಾನು ಹಲವು ಗಲಾಟೆ ಪ್ರಕರಣಗಳಲ್ಲಿ ಜಯಶಾಲಿಯಾಗಿ ಬಂದವನು. ನಿಮ್ಮನ್ನೆಲ್ಲ ಕೊಲೆ ಮಾಡಿ ಕೇಸಿಲ್ಲದಂತೆ ಮಾಡುತ್ತೇನೆ” ಎಂದು ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ದಿನೇಶ್ ಅವರ ತಾಯಿ ಮಗನಿಗೂ ಹಾಗೂ ಮಗಳಿಗೂ ಹೊಡೆಯಬೇಡಿ ಎಂದು ಆರೋಪಿಗಳ ಕಾಲಿಗೆ ಬಿದ್ದು ಅಂಗಲಾಚಿದರೂ ಹಲ್ಲೆ ನಿಲ್ಲಿಸದೆ, ಕೆನ್ನೆ, ಹೊಟ್ಟೆ, ಎದೆ, ಭುಜಕ್ಕೆ ಕೈಯಿಂದ ಹೊಡೆದು, ಕಾಲಿನಿಂದ ಹೊಟ್ಟೆ, ಕಾಲು ಹಾಗೂ ಬೆನ್ನಿಗೆ ಒದ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸ್ ತನಿಖೆ ಮುಂದುವರಿದಿದೆ.






