ಯುವಜನ

ಬಳ್ಕೂರಿನಲ್ಲಿ ಟಿಪ್ಪರ್‌ಗಳ ಅಪಘಾತ ಪ್ರಕರಣ: ಗಂಭೀರ ಗಾಯಗೊಂಡಿದ್ದ ಕಾಲೇಜು ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಸಾವು

Views: 67

ಕನ್ನಡ ಕರಾವಳಿ ಸುದ್ದಿ: ಅಕ್ರಮವಾಗಿ ಕೊಜೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್‌ಗಳ ಅಡ್ಡಾದಿಡ್ಡಿ ಚಾಲನೆಯಿಂದ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಲೇಜು ವಿದ್ಯಾರ್ಥಿ ಟಿ.ಕೆ. ಮೊಹಮ್ಮದ್ ಶಯಾನ್ (18) ಅವರು ಚಿಕಿತ್ಸೆ ಫಲಿಸದೆ ನವೆಂಬರ್ 2ರ ರಾತ್ರಿ ಮೃತಪಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ವಿದ್ಯಾರ್ಥಿ ಮೊಹಮ್ಮದ್ ರಯಾನ್ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಕ್ಟೋಬರ್ 30ರಂದು ಬೆಳಿಗ್ಗೆ ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ರಾಜ್ಯ ಹೆದ್ದಾರಿ 52ರಲ್ಲಿ ಈ ಅಪಘಾತ ಸಂಭವಿಸಿತ್ತು. ಕಾಲೇಜಿಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಟಿಪ್ಪರ್‌ಗಳ ಅಜಾಗರೂಕ ಚಾಲನೆಯಿಂದ ಗಂಭೀರವಾಗಿ ಗಾಯಗೊಂಡಿದ್ದರು.

ಪೊಲೀಸರ ಮಾಹಿತಿ ಪ್ರಕಾರ, ಅಂದು ಬೆಳಿಗ್ಗೆ ಸುಮಾರು 8.45ರ ವೇಳೆಗೆ ಕುಂದಾಪುರ ಕಡೆಯಿಂದ ಎರಡು ಟಿಪ್ಪರ್‌ಗಳು ಸಂಚರಿಸುತ್ತಿದ್ದವು. ಮುಂಭಾಗದಲ್ಲಿದ್ದ ಟಿಪ್ಪರ್ ಚಾಲಕ ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಗಮನಿಸಿ ವಾಹನದ ವೇಗ ಕಡಿಮೆ ಮಾಡಿದ್ದಾನೆ. ಈ ವೇಳೆ ಹಿಂಬದಿಯಿಂದ ಅತಿವೇಗವಾಗಿ ಬಂದ ಮತ್ತೊಂದು ಟಿಪ್ಪರ್ ಮುಂಭಾಗದ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ಟಿಪ್ಪರ್ ರಸ್ತೆಯ ಬಲಭಾಗಕ್ಕೆ ಚಲಿಸಿ, ಕಂಡ್ಲೂರು ಕಡೆಯಿಂದ ಬಸ್ರೂರು ಕಡೆಗೆ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್‌ನಲ್ಲಿದ್ದ ಟಿ.ಕೆ. ಮೊಹಮ್ಮದ್ ಶಯಾನ್ ಮತ್ತು ಮೊಹಮ್ಮದ್ ರಯಾನ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಇಬ್ಬರನ್ನೂ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಶಯಾನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅಕ್ರಮವಾಗಿ ಕೊಜೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್‌ಗಳ ಸಂಚಾರ ಹಾಗೂ ಅತಿವೇಗದ ಚಾಲನೆ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ಗ್ರಾಮಾಂತರ ಪೊಲೀಸರು, ಟಿಪ್ಪರ್ ಚಾಲಕರಾದ ನಾಗರಾಜ ಮತ್ತು ರತ್ವೀಜ್ ಅವರನ್ನು ಬಂಧಿಸಿದ್ದಾರೆ.

ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!