ಪ್ರೀತಿ ನಿರಾಕರಣೆ..ಕ್ಲಾಸ್ ರೂಂಗೆ ನುಗ್ಗಿ ಬಾಲಕಿ ಮೇಲೆ ಮರ ಕೊಯ್ಯುವ ಯಂತ್ರದಿಂದ ಹತ್ಯೆ ಮಾಡಿದ ಪಾಗಲ್ ಪ್ರೇಮಿ!
Views: 43
ಕನ್ನಡ ಕರಾವಳಿ ಸುದ್ದಿ: ಪ್ರೀತಿ ನಿರಾಕರಿಸಿದ ಕಾರಣಕ್ಕೆ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಮಂಡಲದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಗೋಪಿಕಾ ಎಂದು ಗುರುತಿಸಲಾಗಿದೆ. ತರಗತಿಯಲ್ಲಿ ಎಂದಿನಂತೆ ಪಾಠ ನಡೆಯುತ್ತಿತ್ತು. ವಿದ್ಯಾರ್ಥಿಗಳು ಪಾಠದಲ್ಲಿ ಮಗ್ನರಾಗಿದ್ದರು. ಆದರೆ, ಬಳಿಕ ಶಾಲೆಯೊಳಗೆ ನಡೆದ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಕೈಯಲ್ಲಿ ಮರ ಕಡಿಯುವ ಯಂತ್ರ ಹಿಡಿದುಕೊಂಡು ತರಗತಿಯೊಳಗೆ ನುಗ್ಗಿದ ಆರೋಪಿ, ಏಕಾಏಕಿ ಗೋಪಿಕಾಳ ಮೇಲೆ ದಾಳಿ ನಡೆಸಿದ್ದಾನೆ.
ಸಹಪಾಠಿಗಳು ನೋಡುತ್ತಿದ್ದಂತೆಯೇ ಗೋಪಿಕಾಳ ಮುಖದ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ, ಆಕೆಯ ತಲೆ ಮತ್ತು ಬೆನ್ನಿನ ಭಾಗಕ್ಕೂ ಹಲ್ಲೆ ನಡೆಸಿದ್ದಾನೆ. ಈ ವೇಳೆ ಗೋಪಿಕಾಳನ್ನು ರಕ್ಷಿಸಲು ಮುಂದಾದ ಲಕ್ಷ್ಮಿ ಎಂಬ ಮತ್ತೊಬ್ಬ ವಿದ್ಯಾರ್ಥಿನಿಗೂ ಗಾಯಗಳಾಗಿವೆ.
ದಾಳಿ ನಡೆಸಿದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ತೀವ್ರ ರಕ್ತಸ್ರಾವದಿಂದ ಗೋಪಿಕಾ ತರಗತಿಯಲ್ಲೇ ಕುಸಿದು ಬಿದ್ದಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೋಪಿಕಾಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿದೆ. ಆದರೆ, ವೈದ್ಯರ ಸತತ ಪ್ರಯತ್ನದ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೆ ಗೋಪಿಕಾ ಮೃತಪಟ್ಟಿದ್ದಾಳೆ.
ಆರೋಪಿ ಗೋಪಿಕಾಳ ದೂರದ ಸಂಬಂಧಿಯಾಗಿದ್ದ ಎನ್ನಲಾಗಿದೆ. ಕಳೆದ ಕೆಲವು ಸಮಯದಿಂದ ಆತ ಗೋಪಿಕಾಳನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದನಂತೆ. ಆದರೆ, ಗೋಪಿಕಾ ಆತನ ಪ್ರೀತಿಯನ್ನು ನಿರಾಕರಿಸಿದ್ದಲ್ಲದೆ, ತನ್ನನ್ನು ಹಿಂಬಾಲಿಸದಂತೆ ಎಚ್ಚರಿಕೆ ನೀಡಿದ್ದಳು. ಅಲ್ಲದೆ, ಆತನ ಕಿರುಕುಳದ ಬಗ್ಗೆ ಪೋಷಕರಿಗೆ ದೂರು ನೀಡುವುದಾಗಿಯೂ ತಿಳಿಸಿದ್ದಳು ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಆರೋಪಿ ಗೋಪಿಕಾಳ ಮೇಲೆ ದ್ವೇಷ ಬೆಳೆಸಿಕೊಂಡಿದ್ದ. ಇದೇ ದ್ವೇಷದ ಹಿನ್ನೆಲೆಯಲ್ಲಿ ಶಾಲೆಯೊಳಗೆ ನುಗ್ಗಿ ಈ ಮಾರಣಾಂತಿಕ ದಾಳಿ ನಡೆಸಿದ್ದಾನೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.






