ಸಾಂಸ್ಕೃತಿಕ

ಯಕ್ಷಗಾನ ಯುವ ಭಾಗವತ ಗಣೇಶ್‌ ಆಚಾ‌ರ್ ಬಿಲ್ಲಾಡಿಗೆ ‘ವೀರ ಕನ್ನಡಿಗ’ ರಾಜ್ಯ ಪ್ರಶಸ್ತಿ ಪ್ರದಾನ 

Views: 10

ಕನ್ನಡ ಕರಾವಳಿ ಸುದ್ದಿ: ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಯಕ್ಷಗಾನ ಕಲಾವಿದ ಗಣೇಶ್‌ ಆಚಾ‌ರ್ ಬಿಲ್ಲಾಡಿ ಅವರಿಗೆ ಕರ್ನಾಟಕ ರಾಜ್ಯ ವೀರ ಕನ್ನಡಿಗ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕರ್ನಾಟಕ ರಾಜ್ಯ ಭಾಷೆ, ಜಲ, ನೆಲ ಉಳಿಸಿ ಹೋರಾಟ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.2ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಯಕ್ಷಗಾನ ಕಲೆಯ ಬೆಳವಣಿಗೆ ಹಾಗೂ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಮಿತಿಯ ರಾಜ್ಯಾಧ್ಯಕ್ಷ ಕುಣಜೆ ಮಂಜುನಾಥಗೌಡ ಅವರು ಗಣೇಶ್ ಆಚಾ‌ರ್ ಬಿಲ್ಲಾಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ದಿನಾಂಕ 17.06.1998ರಂದು ಶ್ರೀಮತಿ ಸರೋಜ ಹಾಗೂ ಶ್ರೀಯುತ ರುದ್ರ ಆಚಾರ್ಯ ಇವರ ಪ್ರೀತಿಯ ಮಗನಾಗಿ ಜನನ. ಪಿಯುಸಿ ವರೆಗೆ ವಿದ್ಯಾಭ್ಯಾಸ. ಯಕ್ಷಗಾನದ ಮೇಲೆ ತುಂಬಾನೇ ಆಸಕ್ತಿ ಇದ್ದ ಇವರು ಯಕ್ಷಗಾನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಆಸೆ ತುಂಬಾನೇ ಇತ್ತು ಹಾಗೂ ಇವರು ಯಕ್ಷಗಾನಕ್ಕೆ ಬರಲು ಯಳ್ಳಂಪಳ್ಳಿ ಜಗನ್ನಾಥ್‌ ಆಚಾರ್ಯ (ಬಡಗು ತಿಟ್ಟಿನ ಹಿರಿಯ ಬಣ್ಣದ ವೇಷಧಾರಿ) ಇವರಿಗೆ ತುಂಬಾನೇ ಪ್ರೇರಣೆ ಆದರು.

ಇವರು ಯಕ್ಷಗಾನ ಕಲಿಕೆಯನ್ನು ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಸೇರಿ ಕಲಿತರು. ಕೇಂದ್ರದಲ್ಲಿ ಇವರನ್ನು ನೋಡಿಕೊಂಡವರು ಐರೋಡಿ ರಾಜಶೇಖರ ಹೆಬ್ಬಾ‌ರ್ ಹಾಗೂ ಗುರುಗಳಾಗಿ ಗುಂಡ್ಮಿ ಸದಾನಂದ ಐತಾಳ್, ಹೊಸಾಳ ಉದಯ್ ಕುಮಾರ್, ಬಿದ್ಮಲ್ ಕಟ್ಟೆ ಕೃಷ್ಣಯ್ಯ ಆಚಾರ್ ಹಾಗೂ ಮಹೇಶ್ ಮಂದಾರ್ತಿ. ಯಕ್ಷಗಾನದಲ್ಲಿ ಒಟ್ಟು 5 ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ. “ಕುಶಲವ, ಚಂದ್ರಾವಳಿ ವಿಲಾಸ, ಅಭಿಮನ್ಯು ಕಾಳಗ, ವೃಷಸೇನ ಕಾಳಗ, ಕರ್ಣಾರ್ಜುನ, ಗದಾಯುದ್ದ, ನಾಗನಂದನೆ, ದಕ್ಷಯಜ್ಞ, ಕಾಳಿದಾಸ, ಮಂದಾರ್ತಿ ಕ್ಷೇತ್ರ ಮಹಾತ್ಮೆ, ಶ್ವೇತಕುಮಾರ ಚರಿತ್ರೆ” ಇವರ ನೆಚ್ಚಿನ ಪ್ರಸಂಗಳು. ಇವರಿಗೆ ಯಕ್ಷಗಾನದಲ್ಲಿ ಬರುವ ಎಲ್ಲಾ ರಾಗವು ಇಷ್ಟ. ಅದರಲ್ಲಿಯು “ಹಿಂದೋಳ, ಮದ್ಯಮಾವತಿ, ಕೇದಾರಗೌಳ, ತೋಡಿ, ಬೈರವಿ, ಚಾರುಕೇಶಿ, ಕರಹರಪ್ರಿಯ, ರೇವತಿ, ರೇಗುಪ್ತಿ” ಇವರ ನೆಚ್ಚಿನ ರಾಗಗಳು.

ಬಡಗಿನ ಉದಯೋನ್ಮುಖ ಯುವ ಭಾಗವತ ಇವರು ಇತ್ತೀಚಿಗೆ ಹಾಲಾಡಿ ಮೇಳದ ಪಂಜರದ ಪಕ್ಷಿಯಲ್ಲಿ ಮಾನಸ ವೀಣೆ.. ತಂತಿಯ ಮೀಟಿ.. ಹೊಸ ಗಾನ ಹಾಡಿದೆ ವಿಶಿಷ್ಟ ಗಾನ ಶೈಲಿಯ ಮೂಲಕ ಯಕ್ಷಗಾನ ಪ್ರೇಮಿಗಳ ಗಮನ ಸೆಳೆದಿದ್ದಾರೆ.

ಬಡಗುತಿಟ್ಟಿನ ಯಕ್ಷಗಾನ ರಂಗದಲ್ಲಿ ಇವರು ಅತ್ಯಂತ ಜನಪ್ರಿಯ ಹಾಗೂ ಭರವಸೆಯ ಯುವ ಭಾಗವತರಾಗಿ ಗುರುತಿಸಿಕೊಂಡಿದ್ದಾರೆ.

Related Articles

Back to top button
error: Content is protected !!