ಪತ್ನಿಯ ಇಚ್ಛೆಯಂತೆ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಪತಿರಾಯ!
Views: 85
ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಲಖನೌನಲ್ಲಿ ವೈವಾಹಿಕ ಸಂಬಂಧಕ್ಕೆ ಸಂಬಂಧಿಸಿದ ಅಪರೂಪದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ತನ್ನ ಪತ್ನಿ ಶಾಲಾ ದಿನಗಳ ಪ್ರಿಯಕರನೊಂದಿಗೆ ಜೀವನ ನಡೆಸಲು ಬಯಸಿದ್ದಾಳೆ ಎಂಬ ವಿಚಾರ ತಿಳಿದ ಪತಿಯೊಬ್ಬರು, ಆಕೆಯ ನಿರ್ಧಾರಕ್ಕೆ ಅಡ್ಡಿಪಡಿಸದೆ ಸ್ವತಃ ಮುಂದೆ ನಿಂತು ಪ್ರಿಯಕರನೊಂದಿಗೆ ಮದುವೆ ಮಾಡಿಸಿರುವ ಘಟನೆ ವರದಿಯಾಗಿದೆ.
ಲಖನೌ ಮೂಲದ ವಿಕ್ಕಿ ಎಂಬುವವರು ಪ್ರಾದೇಶಿಕ ರಕ್ಷಕ ದಳದಲ್ಲಿ ಜವಾನರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸುಮಾರು ಒಂದು ವರ್ಷದ ಹಿಂದೆ ಸೋನಾಲಿ ಎಂಬ ಯುವತಿಯೊಂದಿಗೆ ಕುಟುಂಬದವರ ಸಮ್ಮುಖದಲ್ಲಿ ಇವರ ವಿವಾಹ ನಡೆದಿತ್ತು. ಆದರೆ, ಸೋನಾಲಿಗೆ ಮದುವೆಗೂ ಮುನ್ನವೇ ಶಾಲಾ ದಿನಗಳ ಸ್ನೇಹಿತನೊಂದಿಗೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ.
ಮದುವೆಯಾದ ಬಳಿಕವೂ ಸೋನಾಲಿ ತನ್ನ ಹಳೆಯ ಪ್ರಿಯಕರನೊಂದಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದಳು. ಈ ವಿಚಾರ ಮುಂದುವರಿದಿದ್ದು, ಸೆಪ್ಟೆಂಬರ್ 5ರಂದು ಏಕಾಏಕಿ ಪತಿಯ ಮನೆಯಿಂದ ನಾಪತ್ತೆಯಾಗಿದ್ದಳು. ಪತ್ನಿ ಕಾಣೆಯಾಗಿದ್ದರಿಂದ ಆತಂಕಗೊಂಡ ವಿಕ್ಕಿ, ಕುಟುಂಬದವರೊಂದಿಗೆ ಹುಡುಕಾಟ ನಡೆಸಿದರೂ ಆಕೆಯ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ವಿವಿಧ ಜಿಲ್ಲೆಗಳಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ಸೋನಾಲಿ ಹರ್ದೋಯ್ ಪ್ರದೇಶದಲ್ಲಿ ತನ್ನ ಪ್ರಿಯಕರನೊಂದಿಗೆ ಇರುವುದನ್ನು ಪತ್ತೆಹಚ್ಚಿದ್ದಾರೆ. ಬಳಿಕ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸೋನಾಲಿ ತನ್ನ ನಿರ್ಧಾರವನ್ನು ಪೊಲೀಸರ ಹಾಗೂ ಕುಟುಂಬದವರ ಮುಂದೆ ಸ್ಪಷ್ಟವಾಗಿ ತಿಳಿಸಿದ್ದಾಳೆ. ಪತಿಯೊಂದಿಗೆ ಇನ್ನು ಮುಂದೆ ಜೀವನ ನಡೆಸಲು ಸಾಧ್ಯವಿಲ್ಲ. ತನ್ನ ಶಾಲಾ ದಿನಗಳ ಪ್ರಿಯಕರನೊಂದಿಗೇ ಬದುಕಲು ಬಯಸುವುದಾಗಿ ಹೇಳಿದ್ದಾಳೆ.
ಪತ್ನಿಯ ಈ ನಿರ್ಧಾರದಿಂದ ಆರಂಭದಲ್ಲಿ ಅಚ್ಚರಿಗೊಂಡ ವಿಕ್ಕಿ, ಬಳಿಕ ಆಕೆಯ ಇಚ್ಛೆಯನ್ನು ಗೌರವಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಬಲವಂತವಾಗಿ ಯಾರೊಂದಿಗೂ ಜೀವನ ನಡೆಸುವಂತೆ ಮಾಡುವುದಿಲ್ಲ. ತನಗೆ ಇಷ್ಟವಿಲ್ಲದಿದ್ದರೆ ತನ್ನೊಂದಿಗೆ ಇರುವ ಅಗತ್ಯವಿಲ್ಲ ಎಂಬ ಮನೋಭಾವ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ನಂತರ ಎರಡೂ ಕಡೆಯವರ ಒಪ್ಪಿಗೆಯೊಂದಿಗೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. ಬಳಿಕ ಸ್ಥಳೀಯ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಸೋನಾಲಿ ಮತ್ತು ಆಕೆಯ ಪ್ರಿಯಕರ ವಿವಾಹವಾಗಿದ್ದಾರೆ. ವಿಶೇಷವೆಂದರೆ, ಪತಿ ವಿಕ್ಕಿ ಕೂಡ ಈ ಮದುವೆಯ ಸಂದರ್ಭದಲ್ಲಿ ಹಾಜರಿದ್ದು, ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಲಿಹಾಬಾದ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುರೇಂದ್ರ ಭಾಟಿ ಪ್ರತಿಕ್ರಿಯಿಸಿದ್ದು, ಎರಡೂ ಕಡೆಯವರ ಒಪ್ಪಿಗೆಯ ಮೇರೆಗೆ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ. ಈ ಸಂಬಂಧ ಯಾರಿಂದಲೂ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ, ಪತ್ನಿಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸದೆ ಆಕೆಯ ಇಚ್ಛೆಯಂತೆ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಪತಿಯ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.






