ಕರಾವಳಿ

ಕುಂದಾಪುರ: ಗಂಗೊಳ್ಳಿಯಲ್ಲಿ ಬೋಟ್ ಮುಳುಗಡೆ, ಐವರು ಮೀನುಗಾರರು ಪಾರು, ಲಕ್ಷಾಂತರ ರೂ.ನಷ್ಟ

Views: 43

ಕನ್ನಡ ಕರಾವಳಿ ಸುದ್ದಿ :ಕುಂದಾಪುರ ಹಾಗೂ ಗಂಗೊಳ್ಳಿ ಮಧ್ಯದ ಸಮುದ್ರದಲ್ಲಿ ಬೋಟ್ ಮುಳುಗಡೆಯಾಗಿ ಐವರು ಮೀನುಗಾರರು ಪಾರಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರ ಬೋಟೊಂದು ನೀರು ತುಂಬಿದ್ದು, ಬೋಟಿನಲ್ಲಿದ್ದ ಐವರು ಮೀನುಗಾರರನ್ನು ಮತ್ತೊಂದು ಬೋಟಿನ ಮೀನುಗಾರರ ಸಹಕಾರದೊಂದಿಗೆ ಪ್ರಾಣಾಪಾಯದಿಂದ ರಕ್ಷಣೆ ಮಾಡಲಾಗಿದೆ.

ಬೋಟಿನಲ್ಲಿದ್ದ ಪ್ರಕಾಶ್, ರಂಜಿತ್, ರಾಘವೇಂದ್ರ, ರಾಮ ಹಾಗೂ ಶ್ರೀನಿವಾಸ ಪ್ರಾಣಪಾಗಿಂದ ಪಾರದವರು.

ಫೆ.23ರ ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ ಕೆಮ್ಮಣ್ಣಿನ ನಾಗರಾಜ್ ಪುತ್ರನ್ ಅವರ ಶ್ರೀ ದುರ್ಗಾಪರಮೇಶ್ವರಿ ಬೋಟಿನ ಅಡಿಭಾಗಕ್ಕೆ ಫೆ.24ರಂದು ಸಮುದ್ರದಲ್ಲಿ ಯಾವುದೋ ವಸ್ತು ತಾಗಿ, ಎಂಜಿನಿನ ಅಡಿ ಭಾಗದಲ್ಲಿ ನೀರು ಒಳ ಬರಲು ಆರಂಭಿಸಿತು.ನೀರು ತುಂಬಿ ಬೋಟಿನ ಎಂಜಿನ್ ಸ್ಥಗಿತಗೊಂಡಿದೆ. ಕೂಡಲೇ ಬೋಟಿನಲ್ಲಿದ್ದವರು ನೀರು ಖಾಲಿ ಮಾಡಲು ಪ್ರಯತ್ನಿಸಿದರೂ ಆಗಲಿಲ್ಲ. ಅನಂತರ ಸಹಾಯಕ್ಕಾಗಿ ಮಲ್ಪೆ ಬಂದರಿನಿಂದ ಶ್ರೀ ಕೃಷ್ಣ ಬೋಟಿನವರು ಹಾಗೂ ಕೋಸ್ಟ್ ಗಾರ್ಡ್ ನವರು ಬಂದು ಅದರಲ್ಲಿದ್ದವರನ್ನು ರಕ್ಷಿಸಿದ್ದಾರೆ.

ಬಳಿಕ ಬೋಟನ್ನು ಶ್ರೀ ಕೃಷ್ಣ ಬೋಟಿನವರು ಹಗ್ಗ ಕಟ್ಟಿ ಎಳೆದು ಗಂಗೊಳ್ಳಿ ಬಂದರಿನಿಂದ ಸುಮಾರು 8-9 ನಾಟಿಕಲ್ ಮೈಲು ದೂರದಲ್ಲಿ ಎಳೆದುಕೊಂಡು ಬರುವಾಗ ಗಾಳಿ ಹಾಗೂ ಅಲೆಗಳ ಅಬ್ಬರದಿಂದಾಗಿ ಹಗ್ಗ ತುಂಡಾಗಿ, ಬೋಟು ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ಅಂದಾಜು 60-65 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮಾಲಕ ನಾಗರಾಜ್ ಪುತ್ರನ್ ದೂರಿನಲ್ಲಿ ತಿಳಿಸಿದ್ದಾರೆ.

ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!