ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ 12 ಚಕ್ರದ ಲಾರಿ
Views: 39
ಕನ್ನಡ ಕರಾವಳಿ ಸುದ್ದಿ: ಮೂಡಿಗೆರೆ ತಾಲೂಕಿನ ರಸ್ತೆ ತಿರುವಿನಲ್ಲಿ 600 ಅಡಿ ಆಳಕ್ಕೆ ಲಾರಿಯೊಂದು ಉರುಳಿ ಬಿದ್ದಿದೆ.
ಮೂಡಿಗೆರೆ ತಾಲೂಕಿನ ಕೆಳಗೂರು ಟೀ ಎಸ್ಟೇಟ್ ಬಳಿ ಇಂದು ಬೆಳ್ಳಂ ಬೆಳಗ್ಗೆ ಭೀಕರ ಲಾರಿ ಅಪಘಾತ ಸಂಭವಿಸಿದ್ದು, ಸಾವಿನ ದವಡೆಯಿಂದ ಚಾಲಕ ಅದೃಷ್ಟವಶಾತ್ ಪಾರಾಗಿದ್ದಾರೆ. ದೊಡ್ಡ ಬಳ್ಳಾಪುರದಿಂದ ಹಿರೇಬೈಲು ಗ್ರಾಮಕ್ಕೆ ಸಿಮೆಂಟ್ ಸಾಗಿಸುತ್ತಿದ್ದ 12 ಚಕ್ರದ ಲಾರಿಯು ರಸ್ತೆಯ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 60 ಅಡಿ ಆಳದ ಪ್ರಪಾತಕ್ಕೆ ಉರುಳಿದೆ.
ಈ ವೇಳೆ ಲಾರಿಯು ಎಸ್ಟೇಟ್ ಕಾರ್ಮಿಕರ ಲೈನ್ ಮನೆಗಳ ಅಂಗಳಕ್ಕೆ ಬಂದು ಬಿದ್ದಿದೆ. ಇನ್ನೊಂದು ಪಲ್ಟಿಯಾಗಿದ್ದಲ್ಲಿ ದೊಡ್ಡ ಮಟ್ಟದ ಸಾವು – ನೋವು ಸಂಭವಿಸುವ ಸಾಧ್ಯತೆಯಿತ್ತು. ಅಪಘಾತದ ತೀವ್ರತೆಗೆ ಲಾರಿಯ ಕ್ಯಾಬಿನ್ ಸಂಪೂರ್ಣ ಜಜ್ಜಲ್ಪಟ್ಟಿದ್ದು, ಅದರೊಳಗೆ ಸಿಲುಕಿಕೊಂಡಿದ್ದ ಚಾಲಕ ಸುಮಾರು ಎರಡು ಗಂಟೆಗಳ ಕಾಲ ಹೊರಬರಲಾಗದೇ ನರಕಯಾತನೆ ಅನುಭವಿಸಿದ್ದಾರೆ.
ತಕ್ಷಣ ಕಾರ್ಯ ಪ್ರವೃತ್ತರಾದ ಬಾಳೂರು ಪೊಲೀಸರು, ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸತತ ಕಾರ್ಯಾಚರಣೆ ನಡೆಸಿ ಕ್ರೇನ್ ನೆರವಿನಿಂದ ಲಾರಿಯನ್ನು ಪಕ್ಕಕ್ಕೆ ಸರಿಸಿ, ಚಾಲಕನನ್ನು ರಕ್ಷಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಚಾಲಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.






