ಇತರೆ

ಅಮಾಸೆಬೈಲು:ಆತ್ಮಹತ್ಯೆ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಪತ್ತೆ, ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ತಾಯಿ!

Views: 138

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಅಮಾಸೆಬೈಲ್ ಸಮೀಪ ಶೇಡಿಮನೆ ಗ್ರಾಮದ ಮಹಿಳೆಯೊಬ್ಬರು ಮನೆಯೊಳಗೆ ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಅವರ ತಾಯಿ ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿನ ಜಲಜಾ ಪೂಜಾರಿ ಅವರ ಮಗಳು ಮಾಲಿನಿ (27), ಅಳಿಯ ಸಂತೋಷ್ ಮತ್ತು ಮೊಮ್ಮಕ್ಕಳೊಂದಿಗೆ ವಾಸವಿದ್ದು, ಸೀತಾನದಿ ಗೇರುಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಸೆ.29 ರಂದು ಬೆಳಿಗ್ಗೆ 7:45 ಕ್ಕೆ ಎಂದಿನಂತೆ ಕೆಲಸಕ್ಕೆ ತೆರಳಿದ್ದ ಜಲಜಾ ಅವರಿಗೆ ಮಧ್ಯಾಹ್ನ 3:15 ಕ್ಕೆ ಸ್ಥಳೀಯರಿಂದ ಮನೆಯಲ್ಲಿ ಮಕ್ಕಳಿಗೆ ಆರೋಗ್ಯ ಸರಿ ಇಲ್ಲ ಎಂದು ಕರೆ ಬಂದಿದೆ. ಮಧ್ಯಾಹ್ನ 4 ಗಂಟೆಗೆ ಮನೆಗೆ ಬಂದಾಗ ಮಗಳು ಮಾಲಿನಿ ಮನೆಯ ಕೊಠಡಿಯೊಳಗೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ವೇಳೆ ಮನೆಯಲ್ಲಿ ಅಳಿಯನ ಸ್ನೇಹಿತೆ ಪ್ರೇಮಲತಾ (28), ಕಾರ್ಕಳ ಅವರು ಮಾತ್ರ ಇದ್ದರು ಎಂದು ಹೇಳಲಾಗಿದೆ. ಅವರ ಪ್ರಕಾರ, ಬಾಗಿಲಿಗೆ ಚಿಲಕ ಹಾಕಿದ್ದರಿಂದ ಅವರು ಹಂಚು ತೆಗೆದು ಒಳಗೆ ಇಳಿದು ಮಾಲಿನಿಯನ್ನು ಕೆಳಗಿಳಿಸಿ ರಕ್ಷಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಮಾಲಿನಿ ಮತ್ತು ಸಂತೋಷ್ 8 ವರ್ಷಗಳಿಂದ ವೈವಾಹಿಕ ಜೀವನ ನಡೆಸುತ್ತಿದ್ದು, ವೈವಾಹಿಕ ವೈಮನಸ್ಸಿನಿಂದ ಮನನೊಂದು ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಘಟನೆ ಸಮಯದಲ್ಲಿ ಮನೆಯಲ್ಲಿ ಪ್ರೇಮಲತಾ ಮಾತ್ರ ಇದ್ದುದರಿಂದ ಸಾವಿನ ಬಗ್ಗೆ ಸಂಶಯವಿದೆ ಎಂದು ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Articles

Back to top button
error: Content is protected !!