ರಾಜಕೀಯ

ನವರಾತ್ರಿ ಬಳಿಕವೇ ಸಂಪುಟ ವಿಸ್ತರಣೆ? ನಿಗಮ ಮಂಡಳಿ ಪಟ್ಟಿ ಅಂತಿಮ.. ಶೀಘ್ರದಲ್ಲೇ ಪ್ರಕಟ? 

Views: 8

ಕನ್ನಡ ಕರಾವಳಿ ಸುದ್ದಿ: ಸಚಿವ ಸಂಪುಟ ವಿಸ್ತರಣೆಯ ಲೆಕ್ಕಾಚಾರದಲ್ಲಿ ಆಕಾಂಕ್ಷಿಗಳು ಇದೀಗ ನವರಾತ್ರಿ ಪೂರ್ಣ ಗೊಳ್ಳುವ ತನಕ ಕಾಯುವ ಪರಿಸ್ಥಿತಿಯಿದೆ.

ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಸಿಬ್ಲ್ಯೂಸಿ ಸಭೆಯಲ್ಲಿ ಭಾಗವಹಿಸುವ ಮುನ್ನ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಡಿಕೆ ಸಂಪುಟದಲ್ಲಿ ಖಾಲಿಯಿರುವ ಎರಡು ಸ್ಥಾನವನ್ನು ಸಿಎಂ ಡಿ.ಕೆ.ಶಿವಕುಮಾರ್ ಅವರು ರಾಹುಲ್ ಗಾಂಧಿ ಹಾಗೂ ಕೆ.ಸಿ.ವೇಣುಗೋಪಾಲ್ ಜತೆ ಚರ್ಚಿಸಿದರು.

ಖಾಲಿಯಿರುವ 2 ಸ್ಥಾನದಲ್ಲಿ ಒಂದನ್ನು ಮಹಿಳಾ ಕೋಟಾ ಹಾಗೂ ಎಸ್‌ಟಿ ಕೋಟಾದಲ್ಲಿ ಅನ್ನಪೂರ್ಣ ತುಕಾರಾಂ ಅವರಿಗೆ ನೀಡಬೇಕು ಎಂದು ಈಗಾಗಲೇ ತೀರ್ಮಾನಿಸಲಾಗಿದೆ. ಆದರೆ ಇನ್ನುಳಿದ ಒಂದು ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯುತ್ತಿರುವುದರಿಂದ ಯಾರಿಗೆ ನೀಡಿದರೂ ಇನ್ನುಳಿದವರಿಗೆ ಅಸಮಾಧಾನವಾಗಲಿದೆ.

ಹೊಸ ಶಾಸಕರಿಗೆ ನಿಗಮಗಳ ಅಧ್ಯಕ್ಷಗಿರಿ? ಶೀಘ್ರದಲ್ಲೇ ಪ್ರಕಟ

ನಿಗಮ-ಮಂಡಳಿಗಳ ಅಧ್ಯಕ್ಷ ಆಕಾಂಕ್ಷಿಗಳ ಪಟ್ಟಿ ಬಹುತೇಕ ಅಂತಿಮ ಗೊಂಡಿದ್ದು, ಮೂರ್ನಾಲ್ಕು ದಿನಗಳಲ್ಲಿ ಅಧಿಕೃತ ಮುದ್ರೆಯೊಂದಿಗೆ ಪ್ರಕಟಗೊಳ್ಳುವ ಸಾಧ್ಯತೆ ಇದೆ.

ನಿಗಮ-ಮಂಡಳಿಗಳ ಪಟ್ಟಿ ಸಿದ್ಧವಾಗಿದೆ.ಈಗಾಗಲೇ ಇರುವವರು ಮುಂದುವರಿಯಲಿದ್ದು,ಮಂತ್ರಿ ಸ್ಥಾನ ಭಡ್ತಿಯಿಂದ ತೆರವಾದ ಕೆಲವು ನಿಗಮ-ಮಂಡಳಿಗಳಿಗೆ 10-15ಕ್ಕೂ ಹೆಚ್ಚು ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಅಧ್ಯಕ್ಷಗಿರಿ ಒಲಿಯುವ ನಿರೀಕ್ಷೆ ಇದೆ ಎನ್ನಲಾಗಿದೆ.

ಈ ಮಧ್ಯೆ ದಿಲ್ಲಿಯಲ್ಲಿ ಮಂಗಳವಾರ ಹದಿನೈದಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ತಮಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.ಆಗ, ‘ನಿಗಮ-ಮಂಡಳಿಗಳಲ್ಲಿ ಎಲ್ಲರಿಗೂ ಅವಕಾಶ ಸಿಗಲಿದೆ. ಯಾವುದೇ ಆತಂಕ ಬೇಡ’ ಎಂದು ಭರವಸೆ ನೀಡಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Articles

Back to top button
error: Content is protected !!