ಜನಮನ

ಮೂಕಾಂಬಿಕಾ ರೋಡ್–ಬೈಂದೂರಿನಲ್ಲಿ ವಂದೇ ಭಾರತ್ ರೈಲು ನಿಲುಗಡೆ 

Views: 41

ಕನ್ನಡ ಕರಾವಳಿ ಸುದ್ದಿ: ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮೂಕಾಂಬಿಕಾ ರೋಡ್–ಬೈಂದೂರು ನಿಲ್ದಾಣದ ಮೂಲಕ ಬೆಂಗಳೂರು (ಯಶವಂತಪುರ) ವರೆಗೆ ವಿಸ್ತರಿಸಿರುವುದಕ್ಕೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಪ್ರಧಾನಮಂತ್ರಿ ನರೇಂದ್ರ ಮೋದಿರವರಿಗೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರವರಿಗೆ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣನವರಿಗೆ ಜನತೆ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.

ಸ್ವತಃ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರವರೇ ಸಂಸದ ರಾಘವೇಂದ್ರ ಅವರಿಗೆ ಅಧಿಕೃತವಾಗಿ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಸಂಸದ ರಾಘವೇಂದ್ರ, ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಹೇಳಿದ್ದಾರೆ. ಬೆಂಗಳೂರು, ಮಲೆನಾಡು, ಕರಾವಳಿ ಕರ್ನಾಟಕ ಹಾಗೂ ಗೋವಾ ನಡುವಿನ ರೈಲು ಸಂಪರ್ಕವನ್ನು ಇದು ಮತ್ತಷ್ಟು ಬಲಪಡಿಸಲಿದೆ. ಈ ಸುಧಾರಿತ ಸಂಪರ್ಕದಿಂದ ತಮ್ಮ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಬೈಂದೂರು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಮತ್ತು ಯಾತ್ರಾ ನಕ್ಷೆಯಲ್ಲಿ ಮತ್ತಷ್ಟು ಪ್ರಮುಖ ಸ್ಥಾನ ಪಡೆಯಲಿದ್ದು, ಹೆಚ್ಚು ಸಂಪರ್ಕಿತ ಮತ್ತು ವಿಕಸಿತ ಬೈಂದೂರಿನತ್ತ ಹೊಸ ಹೆಜ್ಜೆಗೆ ಇದು ನಾಂದಿಯಾಗಲಿದೆ ಎಂದು ರಾಘವೇಂದ್ರ ಹೇಳಿದ್ದಾರೆ.

ಬೈಂದೂರಿಗೆ ವಂದೇ ಭಾರತ್ ಸಂಪರ್ಕದ ಬೇಡಿಕೆಯ ಈಡೇರಿಕೆಗಾಗಿ ಸಂಸದ ರಾಘವೇಂದ್ರ ಅವರು ಕೇಂದ್ರ ರೈಲ್ವೆ ಸಚಿವಾಲಯದೊಂದಿಗೆ ನಿರಂತರವಾಗಿ ಪ್ರಯತ್ನ ನಡೆಸಿದ್ದರು. ಫೆಬ್ರವರಿ 2026ರಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣನವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ, ಬೈಂದೂರಿಗೆ ವಂದೇ ಭಾರತ್ ಸಂಪರ್ಕ ಒದಗಿಸುವಂತೆ ಕೋರಿ ವಿಸ್ತೃತ ಮನವಿಗಳನ್ನು ಸಲ್ಲಿಸಿದ್ದರು. ಬಳಿಕ ಆಗಸ್ಟ್ 2026ರಲ್ಲಿ ರೈಲ್ವೆ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿಯಾಗಿ, ಈ ಭಾಗದ ಜನರಿಗೆ ಅನುಕೂಲವಾಗುವಂತೆ ಸೂಕ್ತ ನಿಲುಗಡೆಗಳನ್ನು ಕಲ್ಪಿಸುವಂತೆ ಮತ್ತೊಮ್ಮೆ ಮನವಿ ಮಾಡಿದ್ದರು.

Related Articles

Back to top button
error: Content is protected !!