ಜನಮನ

ಕುಂದಾಪುರ: ಪತ್ನಿಗೆ ನರ್ಸ್ ಎಂದು ನಂಬಿಸಿ ಪ್ರಿಯತಮೆಯಿಂದ ವಿಷಕಾರಿ ಇಂಜೆಕ್ಷನ್: ಕೊಲ್ಲೂರು ಹಾಲ್ಕಲ್ ಸಮೀಪ ಜೋಡಿ ಆತ್ಮಹತ್ಯೆ! 

Views: 206

ಕನ್ನಡ ಕರಾವಳಿ ಸುದ್ದಿ: ಪತ್ನಿಗೆ ವಿಷಕಾರಿ ಇಂಜೆಕ್ಷನ್ ನೀಡಿಸಿ ಹತ್ಯೆಗೆ ಯತ್ನಿಸಿದ ಆರೋಪ ಎದುರಿಸುತ್ತಿದ್ದ ಆಟೋ ಚಾಲಕನೊಬ್ಬ ತನ್ನ ಪ್ರೇಮಿಯೊಂದಿಗೆ ಕೊಲ್ಲೂರು ಕಾಡಿನೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಲ್ಲೂರು  ಹಾಲ್ಕಲ್ ಸಮೀಪದ ಚಾರ್ಸಾಲ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

ಮೃತರನ್ನು ಚಾರ್ಸಾಲ್ ನಿವಾಸಿ ಹಾಗೂ ಕೊಲ್ಲೂರು ಆಟೋ ನಿಲ್ದಾಣದ ರಿಕ್ಷಾ ಚಾಲಕ ವಿಠಲ ನಾಯ್ಕ್ ಮತ್ತು ಹೊಸೂರು ಗ್ರಾಮದ ಶಾಲೋಂ ಕಾಂಪ್ಲೆಕ್ಸ್ ಸಮೀಪದ ದರುಕೋಡು ನಿವಾಸಿ, ಟೈಲರ್ ವೃತ್ತಿಯ ಭವ್ಯ ಎಂದು ಗುರುತಿಸಲಾಗಿದೆ.

ವಿಠಲ ನಾಯ್ಕ್ ವಿವಾಹಿತನಾಗಿದ್ದು, ಗರ್ಭಿಣಿ ಪತ್ನಿ ಹಾಗೂ ಪುತ್ರನೊಂದಿಗೆ ವಾಸಿಸುತ್ತಿದ್ದ. ಈ ನಡುವೆ ಟೈಲರ್ ವೃತ್ತಿ ಮಾಡಿಕೊಂಡಿದ್ದ ಭವ್ಯಯೊಂದಿಗೆ ಆತನಿಗೆ ಪರಿಚಯವಾಗಿದ್ದು, ಬಳಿಕ ಅದು ಪ್ರೇಮ ಸಂಬಂಧಕ್ಕೆ ತಿರುಗಿತ್ತು ಎಂದು ತಿಳಿಯಲಾಗಿದೆ.

ಭವ್ಯ ಈಗಾಗಲೇ ಮದುವೆಯಾಗಿದ್ದು, ಗಂಡ ತೀರಿಕೊಂಡ ನಂತರ ಹಲವರೊಂದಿಗೆ ಸಂಬಂಧ ಬೆಳೆಸಿದ್ದಾಳೆ ಎಂದು ತಿಳಿದು ಬಂದಿದೆ.

ಈ ಜೋಡಿ ಪತ್ನಿಯನ್ನು ಹತ್ಯೆಗೈಯಲು ಸಂಚು ರೂಪಿಸಿದ್ದರು. ಗಣೇಶ ಚತುರ್ಥಿಯ ಸಂದರ್ಭದಲ್ಲಿ ವಿಠಲ ನಾಯ್ಕ್ ತನ್ನ ಪತ್ನಿಗೆ ಭವ್ಯಳನ್ನು ನರ್ಸ್ ಎಂದು ಪರಿಚಯಿಸಿದ್ದ ಎನ್ನಲಾಗಿದ್ದು, ಬಳಿಕ ಆಕೆಯ ಮೂಲಕ ವಿಷಕಾರಿ ದ್ರವ್ಯವಿದ್ದ ಸಿರಿಂಜ್ ಅನ್ನು ಪತ್ನಿಗೆ ಚುಚ್ಚಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಇದರಿಂದ ಅಸ್ವಸ್ಥಗೊಂಡ ಮಹಿಳೆಯನ್ನು ಸ್ಥಳೀಯರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸಿದ ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ವಿಠಲ ನಾಯ್ಕ್ ಹಾಗೂ ಭವ್ಯ ಇಬ್ಬರೂ ಮೈಸೂರಿಗೆ ಪರಾರಿಯಾಗಿದ್ದರು ಎನ್ನಲಾಗಿದೆ.

ನಂತರ ಇಬ್ಬರೂ ಕೊಲ್ಲೂರು ಭಾಗಕ್ಕೆ ಮರಳಿದ್ದು, ಹಾಲ್ಕಲ್ ಸಮೀಪದ ಚಾರ್ಸಾಲ್‌ನ ದಟ್ಟ ಕಾಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸುಮಾರು 15 ದಿನಗಳ ಹಿಂದೆಯೇ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಮಂಗಳವಾರ ಘಟನೆ ಬೆಳಕಿಗೆ ಬಂದಿದೆ. ದೇಹಗಳು ಕೊಳೆತು ಗುರುತು ಪತ್ತೆಹಚ್ಚಲು ಕಷ್ಟವಾಗುವ ಸ್ಥಿತಿಯಲ್ಲಿದ್ದವು ಎನ್ನಲಾಗಿದೆ.

ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣವೇನು ಹಾಗೂ ಪತ್ನಿಗೆ ವಿಷಕಾರಿ ಇಂಜೆಕ್ಷನ್ ನೀಡಿದ ಆರೋಪದ ಹಿಂದಿನ ವಾಸ್ತವಾಂಶಗಳೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Back to top button
error: Content is protected !!