ಹೋಮ್‌ಸ್ಟೇನಲ್ಲಿ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣ: ಸಾಮೂಹಿಕ ಅತ್ಯಾಚಾರ ನಡೆಸಿ, ಹಲ್ಲೆ ಶಂಕೆ?
Views: 41
ಕನ್ನಡ ಕರಾವಳಿ ಸುದ್ದಿ: ಹೋಮ್‌ಸ್ಟೇಯೊಂದರಲ್ಲಿ 22 ವರ್ಷದ ವಿಶ್ವವಿದ್ಯಾಲಯ ವಿದ್ಯಾರ್ಥಿನಿ ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣ ತೀವ್ರ ಸಂಚಲನ ಮೂಡಿಸಿದೆ.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಹಮ್ಮದ್ ಆಸಿಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಗುವಾಹಟಿ ವಿಶ್ವವಿದ್ಯಾಲಯದ 22 ವರ್ಷದ ವಿದ್ಯಾರ್ಥಿನಿ ನಗರದ ಹೊರವಲಯದ ಗರಾಲ್‌ನಲ್ಲಿರುವ ಹೋಮ್‌ಸ್ಟೇಯೊಂದರಲ್ಲಿ ಆಸಿಫ್ ಅಲಿ ಜೊತೆ ತಂಗಿದ್ದಳು. ಶುಕ್ರವಾರ ತಡರಾತ್ರಿ ಆಕೆ ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಆಕೆಯನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ, ಬಳಿಕ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಸಿಫ್ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಈ ಹೇಳಿಕೆಯನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಈ ಕುರಿತು ಮಾತನಾಡಿದ ಗುವಾಹಟಿ ಪಶ್ಚಿಮ ಡಿಸಿಪಿ ಬೋಲಿನ್ ಡಿಯೋರಿ, “ಆರೋಪಿಯ ಹೇಳಿಕೆಯನ್ನು ನಾವು ನಂಬುತ್ತಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ ಇದು ಕೊಲೆ ಪ್ರಕರಣವೆಂದು ಶಂಕಿಸಲಾಗಿದೆ. ಆದರೆ ಮೃತದೇಹದ ಮೇಲೆ ಅಥವಾ ಕೊಠಡಿಯ ನೆಲದ ಮೇಲೆ ರಕ್ತದ ಕಲೆಗಳು ಕಂಡುಬಂದಿಲ್ಲ. ತನಿಖೆ ಮುಂದುವರಿದಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ತನ್ನ ಮಗಳ ಸಾವಿಗೆ ಮುನ್ನ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹಲ್ಲೆ ಮಾಡಿ ಕೊಲ್ಲಲಾಗಿದೆ ಎಂದು ಮೃತ ವಿದ್ಯಾರ್ಥಿನಿಯ ತಂದೆ ಗಂಭೀರ ಆರೋಪ ಮಾಡಿದ್ದಾರೆ.
ಮಗಳ ಮೈಮೇಲೆ ಗಾಯದ ಗುರುತುಗಳಿದ್ದು, ಕೊಲೆಗೂ ಮುನ್ನ ಆಕೆಯನ್ನು ತೀವ್ರವಾಗಿ ಹಿಂಸಿಸಲಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಆರೋಪಿಯ ಕುಟುಂಬದ ಹೇಳಿಕೆ:
ದಿನಗೂಲಿ ಕಾರ್ಮಿಕರ ಕುಟುಂಬದ ಆಸಿಫ್, ಪೇಂಟರ್ ಆಗಿ ಕೆಲಸ ಮಾಡುತ್ತಿದ್ದು, ಬಿಡುವಿನ ವೇಳೆಯಲ್ಲಿ ‘ರ‌್ಯಾಪಿಡೋ’ ಓಡಿಸುತ್ತಿದ್ದ. ಆತನ ತಂದೆ ಮಾತನಾಡಿ, “ನನ್ನ ಮಗ ಆಕೆಯನ್ನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದ. ಶುಕ್ರವಾರ ಆಕೆಯೇ ಕರೆ ಮಾಡಿ ಭೇಟಿಯಾಗಲು ಕೇಳಿದ್ದಳು. ಆಕೆಯ ಸ್ಥಿತಿ ಹದಗೆಟ್ಟಾಗ ನನ್ನ ಮಗನೇ ಆಸ್ಪತ್ರೆಗೆ ಕರೆದೊಯ್ದು ಭದ್ರತಾ ಸಿಬ್ಬಂದಿಯ ನೆರವಿನಿಂದ ದಾಖಲಿಸಿದ್ದಾನೆ” ಎಂದು ಹೇಳಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಬೆಳಕಿಗೆ ಬರಬೇಕಿದೆ.






