ಬಸ್ರೂರಿನಲ್ಲಿ ರಕ್ತದಾನ ಶಿಬಿರ, ಉಚಿತ- ಥೈರಾಯ್ಡ್, ಇಸಿಜಿ, ಶುಗರ್ ಪರೀಕ್ಷೆ ಉದ್ಘಾಟನಾ ಸಮಾರಂಭ
ಬಸ್ರೂರು ವಲಯ ಪದ್ಮಶಾಲಿ ಕ್ರಿಯಾ ವೇದಿಕೆ ರಜತ ಮಹೋತ್ಸವ ಅಂಗವಾಗಿ ವಿವಿಧ ಸಂಘಟನೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ, ಉಚಿತ ಥೈರಾಯ್ಡ್, ಇಸಿಜಿ, ಶುಗರ್ ಪರೀಕ್ಷೆ
Views: 0
ಕನ್ನಡ ಕರಾವಳಿ ಸುದ್ದಿ: ರಜತ ಮಹೋತ್ಸವ ಸಮಿತಿ ಬಸ್ರೂರು ವಲಯ ಪದ್ಮಶಾಲಿ ಕ್ರಿಯಾ ವೇದಿಕೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಬ್ಲಡ್ ಸೆಂಟರ್ ಕುಂದಾಪುರ, ಲಯನ್ಸ್ ಕ್ಲಬ್ ಹಂಗಳೂರು, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬಸ್ರೂರು ಘಟಕ, ಆಟೋ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ ಬಸ್ರೂರು, ಬಸ್ರೂರು ಸ್ಪೋರ್ಟ್ಸ್ ಕ್ಲಬ್ (ರಿ.) ಬಸ್ರೂರು, ಮಹಿಷಮರ್ಧಿನಿ ಯುವಕ ಮಂಡಲ ಬಸ್ರೂರು ಇವರ ಸಹಯೋಗದೊಂದಿಗೆ ಸೆಪ್ಟೆಂಬರ್ 27 ರಂದು ಆದಿತ್ಯವಾರ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ರಕ್ತದಾನ ಶಿಬಿರ, ಉಚಿತ ಥೈರಾಯ್ಡ್ ಮತ್ತು ಇಸಿಜಿ, ಶುಗರ್ ಪರೀಕ್ಷೆ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ಕುಂದಾಪುರದ ಮಾನ್ಯ ಶಾಸಕರಾರ ಶ್ರೀ ಕಿರಣ್ ಕುಮಾರ್ ಕೊಡ್ಗಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಉನ್ನತ ಮಟ್ಟದಲ್ಲಿ ಸಮಾಜವನ್ನು ಸಂಘಟಿಸಿ ಸಮಾಜದ ಅಶಕ್ತರಿಗೆ ಸಹಕಾರ ನೀಡುವುದರೊಂದಿಗೆ ಇಡೀ ವರ್ಷ ನಡೆಯುವ ಸಮಾಜಮುಖಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಸ್ವ ಸಮಾಜದ ಅಭಿವೃದ್ಧಿಯೊಂದಿಗೆ ಎಲ್ಲಾ ಸಮಾಜದ ಅಭಿವೃದ್ಧಿಯಾಗಲಿ ಶುಭ ಹಾರೈಸಿದರು.
ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದಲ್ಲಿ ಆರೋಗ್ಯದ ವಿಚಾರದಲ್ಲಿ ನಮ್ಮ ಜಿಲ್ಲೆಯು ಮೇಲ್ಮಟ್ಟದ ಸ್ಥಾನ ಪಡೆದುಕೊಂಡಿದೆ. ಕರಾವಳಿಯಲ್ಲಿ ಹಿಂದುಳಿದ ಸಣ್ಣ ನೇಕಾರ ಪದ್ಮಶಾಲಿ ಸಮುದಾಯವು ಸಮಾಜವನ್ನು ಕಟ್ಟಿ ಬೆಳೆಸುವ ಉದ್ದೇಶದಿಂದ ಉತ್ತಮ ಸಂಘಟನೆಯ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಯಾಗಲಿ ಎಂದರು.
ವೇದಿಕೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷ ಶ್ರೀ ಜಯಕರ ಶೆಟ್ಟಿ ಮಾತನಾಡಿ, ರಕ್ತದಾನವು ಒಂದು ಜೀವ ಉಳಿಸುವ ಮಹಾನ್ ಕಾರ್ಯವಾಗಿದ್ದು ಒಂದು ಯುನಿಟ್ ರಕ್ತವು ಮೂರು ಜನರ ಜೀವವನ್ನು ಉಳಿಸಬಹುದು. ನೀವು ನೀಡಿದ ರಕ್ತದಾನವು ಆಪತ್ಕಾಲದಲ್ಲಿ ರೋಗಿಗಳಿಗೆ ಮರು ಜೀವ ನೀಡುತ್ತದೆ. ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ ರಕ್ತದಾನದ ಮೂಲಕ ಈ ಕೊರತೆಯನ್ನು ನೀಗಿಸಬಹುದು ಎಂದರು.
ರಜತ ಮಹೋತ್ಸವ ಸಮಿತಿ ಪದ್ಮಶಾಲಿ ಕ್ರಿಯಾ ವೇದಿಕೆ ಬಸ್ರೂರು ಇದರ ಅಧ್ಯಕ್ಷರಾದ ರಾಜೇಂದ್ರ ಶೆಟ್ಟಿಗಾರ್ ಬಸ್ರೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಕಳಕಳಿಯ ಮುಖಾಂತರ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೇಲಕ್ಕೆ ತರುವುದು ನಮ್ಮ ಉದ್ದೇಶವಾಗಿದೆ. ಬೆಳ್ಳಿ ಹಬ್ಬದ ಹೊಸ್ತಿಲಲ್ಲಿರುವ ನಮ್ಮ ಸಂಸ್ಥೆಯಿಂದ ಯಾವುದಾದರೂ ಒಂದು ದೇವಸ್ಥಾನ, ಶಾಲೆಯ ಸ್ವಚ್ಛತೆ, ಅಂತರ್ ವಲಯ ಪದ್ಮಶಾಲಿ ಕ್ರೀಡಾಕೂಟ, ಕಡು ಬಡವರಿಗೆ ಸಹಾಯಧನ ಮತ್ತು ಒಬ್ಬರಿಗೆ ಮನೆ ಕಟ್ಟಿಕೊಡುವ ಉದ್ದೇಶ ನಮ್ಮದಾಗಿದೆ ಎಂದರು.
ವೇದಿಕೆಯಲ್ಲಿ ರಜತ ಮಹೋತ್ಸವ ಸಮಿತಿ ಪದ್ಮಶಾಲಿ ಕ್ರಿಯಾ ವೇದಿಕೆ ಬಸ್ರೂರು ಇದರ ಗೌರವಾಧ್ಯಕ್ಷರಾದ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ್, ವಾಸ್ತು ತಜ್ಞ ಡಾ. ಬಸವರಾಜ್ ಶೆಟ್ಟಿಗಾರ್, ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀ ಹಂಸರಾಜ್ ಶೆಟ್ಟಿ, ಬಸ್ರೂರು ಪದ್ಮಶಾಲಿ ಕ್ರಿಯಾ ವೇದಿಕೆಯ ಅಧ್ಯಕ್ಷ ಶ್ರೀ ಚಂದ್ರಶೇಖರ್ ಶೆಟ್ಟಿಗಾರ್, ಬಸ್ರೂರು ರಿಕ್ಷಾ ಚಾಲಕ- ಮಾಲಕರ ಸಂಘದ ಅಧ್ಯಕ್ಷ ಶ್ರೀ ಅಶೋಕ್ ಕೆರೆಕಟ್ಟೆ ಬಸ್ರೂರು, ಮಹಿಷ ಮರ್ದಿನಿ ಯುವಕ ಮಂಡಲದ ಕಾರ್ಯದರ್ಶಿ ಶ್ರೀ ಮಹೇಶ್ ಮೆಂಡನ್, ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶ್ರೀ ಸತ್ಯನಾರಾಯಣ ಶೆಟ್ಟಿಗಾರ್, ಬಸ್ರೂರು ಎಬಿವಿಪಿ ಘಟಕದ ಅಧ್ಯಕ್ಷ ಶ್ರೀ ಅಭಿಷೇಕ್ ಮಾರ್ಗೋಳಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಭಾರಿ ರಕ್ತದಾನ ಮಾಡಿದ ವಿಜಯ ಪೂಜಾರಿ ಕುಂದಾಪುರ ಅವರನ್ನು ಗೌರವಿಸಲಾಯಿತು.
ರಕ್ತದಾನ ಶಿಬಿರದಲ್ಲಿ ಒಟ್ಟು 115 ಯೂನಿಟ್ ರಕ್ತ ಸಂಗ್ರಹಿಸಲಾಯಿತು. 500ಕ್ಕೂ ಹೆಚ್ಚು ಜನರು ಈ ಶಿಬಿರದ ಸದುಪಯೋಗ ಪಡೆದುಕೊಂಡರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲರನ್ನೂ ಸಭೆಯಲ್ಲಿ ಗೌರವಿಸಲಾಯಿತು.
ರಜತ ಮಹೋತ್ಸವ ಸಮಿತಿ ಕಾರ್ಯದರ್ಶಿ ರವೀಂದ್ರ ಶೆಟ್ಟಿಗಾರ್ ಬಸ್ರೂರು ಸ್ವಾಗತಿಸಿದರು. ಶ್ರೀದೇವಿ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಸುಬ್ಬ ಶೆಟ್ಟಿಗಾರ್ ವಂದಿಸಿದರು.















