ದೀಪಾವಳಿ ಹಬ್ಬದ ವೇಳೆ ಖಾಸಗಿ ಬಸ್ ದರ 2ರಿಂದ 3ಪಟ್ಟು ಹೆಚ್ಚಳ..ಜನ ಸಾಮಾನ್ಯ ಪ್ರಯಾಣಿಕರಿಗೆ ಶಾಕ್!
Views: 9
ಕನ್ನಡ ಕರಾವಳಿ ಸುದ್ದಿ: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕೆ ಸಿದ್ಧತೆ ಜೋರಾಗಿರುವ ಬೆನ್ನಲ್ಲೇ, ತಮ್ಮ ತಮ್ಮ ಊರುಗಳಿಗೆ ತೆರಳಲು ಸಜ್ಜಾಗಿರುವ ಪ್ರಯಾಣಿಕರಿಗೆ ಬಸ್ ಪ್ರಯಾಣದ ದರ ಏರಿಕೆ ಬಿಸಿ ತಟ್ಟಿದೆ.
ಹಬ್ಬದ ಸಾಲು ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾವಿರಾರು ಜನರು ಊರಿನತ್ತ ಪ್ರಯಾಣ ಆರಂಭಿಸಿದ್ದಾರೆ. ನಗರದ ಪ್ರಮುಖ ಬಸ್ ನಿಲ್ದಾಣವಾದ ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ಬಸ್ ಹತ್ತಲು ಜನರು ಪರದಾಡುವ ದೃಶ್ಯ ಕಂಡುಬಂದಿದೆ.
ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಟಿಕೆಟ್ ದರ ಏರಿಕೆಯ ನಡುವೆಯೇ, ದೀಪಾವಳಿ ಹಬ್ಬಕ್ಕೆ ಊರಿನತ್ತ ಮುಖಮಾಡಿರುವ ಪ್ರಯಾಣಿಕರಿಗೆ ಖಾಸಗಿ ಬಸ್ಗಳ ಟಿಕೆಟ್ ದರ ಶಾಕ್ ನೀಡಿದೆ.
ಈಗಾಗಲೇ ದೀಪಾವಳಿಗೆಂದು ರಾಜಧಾನಿಯಿಂದ ಲಕ್ಷಾಂತರ ಮಂದಿ ತಮ್ಮೂರಿನತ್ತ ತೆರಳಿದ್ದಾರೆ. ಸರಕಾರಿ ಬಸ್ ದರ ಶೇ.23ರಿಂದ 30ರಷ್ಟು ಹೆಚ್ಚಾಗಿದೆ ಎಂದು ಗೊಣಗಿದರೆ, ಇನ್ನೊಂದೆಡೆ ಖಾಸಗಿ ಬಸ್ಗಳ ದರ ಎರಡರಿಂದ ಮೂರು ಪಟ್ಟು ಏರಿಕೆಯಾಗಿರುವುದು ಪ್ರಯಾಣಿಕರ ಜೇಬನ್ನು ಬಿಸಿಯಾಗುವಂತೆ ಮಾಡಿದೆ.
ದೀಪಾವಳಿ ಹಾಗೂ ವಾರಾಂತ್ಯದ ರಜೆ ಇರುವುದರಿಂದ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರ ಲಾಭ ಪಡೆಯಲು ಯತ್ನಿಸುತ್ತಿರುವ ಖಾಸಗಿ ಬಸ್ಗಳು ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಸಿವೆ ಎನ್ನುವ ಆರೋಪ ಕೇಳಿಬರುತ್ತಿದೆ. ಸಾಮಾನ್ಯ ದಿನಗಳಲ್ಲಿ 500 ರುಪಾಯಿಯಿಂದ 1,200ರೊಳಗೆ ಲಭ್ಯವಾಗುತ್ತಿದ್ದ ಟಿಕೆಟ್ಗಳು ಇದೀಗ ಮಾರ್ಗಗಳಲ್ಲಿ ಎರಡರಿಂದ ಐದು ಸಾವಿರ ರು.ಗೆ ಏರಿಕೆಯಾಗಿದೆ. ಕೆಲವು ಮಾರ್ಗಗಳಲ್ಲಿ ಸಾಮಾನ್ಯ ದರಕ್ಕೆ ಹೋಲಿಸಿದರೆ ಎರಡು ಪಟ್ಟು, ಇನ್ನು ಕೆಲವು ಕಡೆ ಮೂರು ಪಟ್ಟು ಹೆಚ್ಚಳವಾಗಿದೆ.
ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸಾಮಾನ್ಯ ದಿನಗಳಲ್ಲಿ 496 ರು.ಯಿಂದ 1,157ರು. ವರೆಗೆ ಇದ್ದ ಖಾಸಗಿ ಬಸ್ ಟಿಕೆಟ್ ದರ ಇದೀಗ 1,785ಯಿಂದ 4,999ರು. ವರೆಗೆ ತಲುಪಿದೆ. ಹುಬ್ಬಳ್ಳಿ ಮಾರ್ಗದಲ್ಲಿ 660 ಯಿಂದ,700 ರು.ವರೆಗೆ ಇದ್ದ ದರ 1,989ರಿಂದ 8 ಸಾವಿರ ರುಪಾಯಿ ಏರಿಕೆಯಾಗಿದೆ. ಧಾರವಾಡಕ್ಕೆ ಸಾಮಾನ್ಯವಾಗಿ 389 1,300 ರುಪಾಯಿವರೆಗೆ ಇದ್ದ ಟಿಕೆಟ್ ದರ ಇದೀಗ 1,400ರಿಂದ 7 ಸಾವಿರ ರುಪಾಯಿಗೆ ತಲುಪಿದೆ. ಇನ್ನು ಮೈಸೂರು ಮಾರ್ಗದಲ್ಲಿ ಸಾಮಾನ್ಯ ದಿನಗಳಲ್ಲಿ 350ರು.ಯಿಂದ ಸಾವಿರದವರೆಗೆ ಇದ್ದ ದರ ಇದೀಗ 450ರಿಂದ 2,200ರವರೆಗೆ ಇದೆ. ಕಲಬುರಗಿ ಖಾಸಗಿ ಬಸ್ಗಳು ಮಾತ್ರ ದರ ಹೆಚ್ಚಿಸಿಲ್ಲ. ಸರಕಾರದ ಸಾರಿಗೆ ವ್ಯವಸ್ಥೆಯಲ್ಲಿ ಯಾವ ರೀತಿ ದರ ಏರಿಕೆಯಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮಾರ್ಗದಲ್ಲಿ 1,699ಯಿಂದ 4 ಸಾವಿರ ರುಪಾಯಿವರೆಗೆ ಟಿಕೆಟ್ ದರ ನಿಗದಿಯಾಗಿರುವುದು ಪ್ರಯಾಣಿಕರಿಗೆ ಹೊರೆಯಾಗಿದೆ.
ಬೇಡಿಕೆ ಹೆಚ್ಚಳವೇ ದರ ಏರಿಕೆಗೆ ಕಾರಣ?
ಹಬ್ಬದ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚಾಗುವುದು ಸಹಜ. ಆದರೆ ಬೇಡಿಕೆ ಹೆಚ್ಚಾದ ತಕ್ಷಣ ಟಿಕೆಟ್ ದರವನ್ನು ಹಲವು ಪಟ್ಟು ಹೆಚ್ಚಿಸುವುದರಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಒಂದೇ ಮಾರ್ಗದಲ್ಲಿ ಪ್ರಯಾಣಿಸುವ ಬಸ್ಗಳಲ್ಲಿಯೂ ಎಸಿ, ನಾನ್ ಎಸಿ, ಸ್ವೀಪರ್, ಸೀಟರ್ ಹಾಗೂ ಬಸ್ ಸೌಲಭ್ಯಗಳಿಗೆ ಅನುಗುಣವಾಗಿ ದರಗಳಲ್ಲಿ ಭಾರಿ ವ್ಯತ್ಯಾಸವಿದೆ. ಸರಕಾರಿ ಬಸ್ ದರವು ಕೂಡ ಏರಿಕೆಯಾಗಿದ್ದು ಜನ ಸಾಮಾನ್ಯರ ಪ್ರಯಾಣಕ್ಕೆ ತೊಂದರೆಯಾಗಿದೆ ಎನ್ನುವ ಆರೋಪ ಕೇಳಿಬಂದಿದೆ.






