ಸುವರ್ಣ ನದಿಗೆ ಈಜಲು ತೆರಳಿದ ಇಬ್ಬರು ಯುವಕರು ನೀರಿನ ಸುಳಿಗೆ ಸಿಲುಕಿ ಸಾವು
Views: 28
ಕನ್ನಡ ಕರಾವಳಿ ಸುದ್ದಿ: ಹಿರ್ಗಾನ ಗ್ರಾಮದ ಮಂಗಿಲಾರು ಬಳಿ ಸುವರ್ಣ ನದಿಗೆ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೆ. 29ರ ಅಪರಾಹ್ನ ಸಂಭವಿಸಿದೆ.
ಹಿರ್ಗಾನ ಗ್ರಾಮದ ರಾಜೀವ ನಗರ ನಿವಾಸಿಗಳಾದ ಪೈಂಟಿಂಗ್ ವೃತ್ತಿ ಮಾಡುತ್ತಿದ್ದ ಭರತ್ ಪೂಜಾರಿ (30) ಹಾಗೂ ಕೊರಿಯರ್ ಕೆಲಸ ಮಾಡುತ್ತಿದ್ದ ಹರ್ಷನ್ ಆಚಾರ್ಯ (23) ಅವರು ಮೃತಪಟ್ಟವರು.
ಭರತ್ ಪೂಜಾರಿ, ಹರ್ಷನ್ ಆಚಾರ್ಯ ವಿತೇಶ್ ಶೆಟ್ಟಿ ರಂಜಿತ್ ನಾಯಕ್, ಕೇತನ್ ನಾಯಕ್ ಸ್ನಾನಕ್ಕೆಂದು ನದಿಗೆ ಹೋಗಿದ್ದು, ನದಿಯಲ್ಲಿ ಈಜಾಟ ನಡೆಸುತ್ತಿದ್ದ ವೇಳೆ ನೀರಿನ ಸುಳಿಗೆ ಸಿಲುಕಿದ ಭರತ್ ಹಾಗೂ ಹರ್ಷನ್ ಏಕಾಏಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಗ್ನಿಶಾಮಕ ದಳದ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದ ತಂಡ ಸ್ಥಳೀಯರ ಸಹಕಾರದೊಂದಿಗೆ ಮೂರು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಶವಗಳನ್ನು ನದಿಯಿಂದ ಮೇಲೆತ್ತಿದ್ದಾರೆ.
ಬಡ ಕುಟುಂಬದವರಾದ ಮೃತ ಭರತ್ ಪೂಜಾರಿ ಅವರು ತಂದೆ, ತಾಯಿ ಜತೆಗೆ ವಾಸವಿದ್ದರು. ಅಕ್ಕನಿಗೆ ಮದುವೆಯಾಗಿದ್ದು, ಕುಟುಂಬದ ಜವಾಬ್ದಾರಿ ಇವರ ಮೇಲೆಯೇ ಇತ್ತು. ಭರತ್ ಅವರು ಹೊಸ ಮನೆ ನಿರ್ಮಿಸುತ್ತಿದ್ದು, ಈಗಾಗಲೇ ಸ್ಲಾಬ್ ಹಂತ ತಲುಪಿದೆ ಎನ್ನಲಾಗಿದೆ. ಹರ್ಷನ್ ಆಚಾರ್ಯ ಅವರೂ ಆರ್ಥಿಕವಾಗಿ ಹಿಂದುಳಿದ ಕುಟುಂಬದವರು. ತಂದೆ ನಿಧನ ಹೊಂದಿದ್ದು, ತಾಯಿ ಹಾಗೂ ಅಕ್ಕನ ಜತೆ ವಾಸವಿದ್ದರು.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ






