ನಿಶ್ಚಿತಾರ್ಥ ಮಾಡಿಕೊಂಡು ಶೀಘ್ರದಲ್ಲೇ ಹಸೆಮಣೆ ಏರಬೇಕಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆ!
Views: 37
ಕನ್ನಡ ಕರಾವಳಿ ಸುದ್ದಿ: ಒಂದು ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡು ಶೀಘ್ರದಲ್ಲೇ ಹಸೆಮಣೆ ಏರಬೇಕಿದ್ದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.
ಕಳೆದ ತಿಂಗಳಿನಲ್ಲಿ ಮದುವೆ ನಿಶ್ಚಯವಾಗಿ, ನಿಶ್ಚಿತಾರ್ಥವಾಗಿದ್ದು, ಅ.25 ರಂದು ಮದುವೆಗೆ ತಯಾರಿ ಕೂಡ ನಡೆಯುತ್ತಿತ್ತು. ಮದುವೆಯ ಸಂಭ್ರಮ ನಡುವೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆ ಮೂಡಿಗೆರೆಯಲ್ಲಿ ನಡೆದಿದ್ದು, ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಅಭಿಷೇಕ್ (25) ಎಂದು ಗುರುತಿಸಲಾಗಿದೆ. ಆತ 5 ದಿನಗಳ ಹಿಂದೆ ವಿಷ ಸೇವಿಸಿದ್ದು, ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ.
ಇನ್ನು ಮದುವೆಯ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಅಭಿಷೇಕ್ ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಾರದ ಕಾರಣ ತನಿಖೆ ನಡೆಸಲಾಗುತ್ತಿದೆ.






