MRPL ಸ್ಪೋಟದ ಬೆನ್ನಲ್ಲೇ ಪ್ರತಿಭಟನೆ: ಮೃತನ ಕುಟುಂಬಕ್ಕೆ ₹90 ಲಕ್ಷ ಪರಿಹಾರ,ಗುತ್ತಿಗೆ ನೌಕರರಿಗೂ ₹10 ಲಕ್ಷದ ಇನ್ಶೂರೆನ್ಸ್ ಭರವಸೆ
Views: 15
ಕನ್ನಡ ಕರಾವಳಿ ಸುದ್ದಿ: ಮಂಗಳೂರು MRPL ಘಟಕದಲ್ಲಿ ಬುಧವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಬಲಿಯಾದ ಮೂಲ್ಕಿ ಮೂಲದ ಯುವ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕಡ ಸಾವಿಗೆ ನ್ಯಾಯ ಮತ್ತು ಗರಿಷ್ಠ ಪರಿಹಾರಕ್ಕೆ ಆಗ್ರಹಿಸಿ ಎಂಆರ್‌ಪಿಎಲ್ ಮುಖ್ಯದ್ವಾರದ ಮುಂಭಾಗ ಕಾರ್ಮಿಕ ಸಂಘಟನೆಗಳು ಗುರುವಾರ ಬೆಳಗ್ಗೆಯಿಂದಲೇ ಬೃಹತ್ ಧರಣಿ ಸತ್ಯಾಗ್ರಹ ನಡೆಯಿತು.
ಎಂಆರ್‌ಪಿಎಲ್-ಒಎನ್‌ಜಿಸಿ ಕರ್ಮಚಾರಿ ಸಂಘ ಹಾಗೂ ಎಂಆರ್‌ಪಿಎಲ್ ಲೇಬರ್ ಯೂನಿಯನ್ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಜಮಾಯಿಸಿ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿ, ಸ್ಥಳಕ್ಕೆ ಎಂಡಿ ಆಗಮಿಸುವಂತೆ ಪಟ್ಟುಹಿಡಿದರು. ಈ ವೇಳೆ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಆಡಳಿತ ಮಂಡಳಿ ಮತ್ತು ಕಾರ್ಮಿಕ ಸಂಘಟನೆಗಳ ನಡುವೆ ಸತತ ಸಂಧಾನ ನಡೆಸಿ, ಯೂನಿಯನ್‌ಗಳ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಫೋಟದಲ್ಲಿ ಜೀವ ಕಳೆದುಕೊಂಡ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಎಂಆರ್‌ಪಿಎಲ್ ವತಿಯಿಂದ 90 ಲಕ್ಷ ರೂ. ನಷ್ಟಪರಿಹಾರ ನೀಡಲು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ (MD) ಅಧಿಕೃತವಾಗಿ ಸಮ್ಮತಿಸಿದ್ದಾರೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.
ಎಂಆರ್‌ಪಿಎಲ್ ಆವರಣದಲ್ಲಿ ಕೆಲಸ ಮಾಡುತ್ತಿರುವ ಕಾಯಂ ಉದ್ಯೋಗಿಗಳಷ್ಟೇ ಅಲ್ಲದೆ, ಅಪಾಯದ ನಡುವೆ ದುಡಿಯುತ್ತಿರುವ ಎಲ್ಲ ಗುತ್ತಿಗೆ ಕಾರ್ಮಿಕರ ಕುಟುಂಬಗಳಿಗೂ ಅನ್ವಯವಾಗುವಂತೆ ತಲಾ 10 ಲಕ್ಷ ರೂ. ಮೊತ್ತದ ಆರೋಗ್ಯ ವಿಮಾ ಸೌಲಭ್ಯವನ್ನು ಮುಂದಿನ 15 ದಿನಗಳ ಒಳಗಾಗಿ ಜಾರಿಗೆ ತರಲು ಎಂಡಿ ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.
ಎಂಆರ್‌ಪಿಎಲ್ ಎಂಡಿ ಅವರು ಮೃತನ ಕುಟುಂಬಕ್ಕೆ 90 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಗುತ್ತಿಗೆ ನೌಕರರೂ ಒಳಗೊಂಡಂತೆ ಎಲ್ಲ ಸಿಬ್ಬಂದಿ ಕುಟುಂಬಗಳಿಗೆ 15 ದಿನಗಳ ಒಳಗಾಗಿ 10 ಲಕ್ಷ ರೂಪಾಯಿ ಮೊತ್ತದ ಮೆಡಿಕಲ್ ಕ್ಲೈಮ್ ಇನ್ಶೂರೆನ್ಸ್ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.






