ಕೊಲ್ಲೂರು ದೇವಸ್ಥಾನದ ಹಣ ಸರಕಾರಕ್ಕೆ ಹೋಗಿಲ್ಲ:ವ್ಯವಸ್ಥಾಪನ ಸಮಿತಿ ಸ್ಪಷ್ಟನೆ

Views: 117
ಕನ್ನಡ ಕರಾವಳಿ ಸುದ್ದಿ: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾ ನದ ಭಂಡಾರದಿಂದ ಸರಕಾರಕ್ಕೆ ಯಾವುದೇ ಹಣ ಸಂದಾಯ ಮಾಡಿಲ್ಲ. ದೇವಸ್ಥಾನದ ಆವರಣದ ಮುಂಭಾಗದಲ್ಲಿ ಹಾದು ಹೋಗುವ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಇದರ ನಿರ್ವಹಣೆ ಜವಾಬ್ದಾರಿ ದೇವಸ್ಥಾನದ್ದಲ್ಲ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ಬಾಬು ಶೆಟ್ಟಿ ಹೇಳಿದ್ದಾರೆ.
ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಆದಾಯ ರಾಜ್ಯ ಸರಕಾರದ ಬೊಕ್ಕಸಕ್ಕೆ ಹೋಗಿದೆ ಮತ್ತು ಕೊಲ್ಲೂರು ದೇವಸ್ಥಾನದ ಆವರಣದಲ್ಲಿ ರಸ್ತೆ ಗುಂಡಿ ಮುಚ್ಚಲು ಯೋಗ್ಯತೆಯಿಲ್ಲದ ನಿಮ್ಮ ಸರಕಾರಕ್ಕೆ, ದೇವಸ್ಥಾನದ ಹುಂಡಿ ಹಣ ಯಾಕೆ ಬೇಕು?’ ಎಂದು ಕರಾವಳಿ ಬಿಜೆಪಿ ಕಾರ್ಯಕರ್ತರ ಬಹಿರಂಗ ಸವಾಲು ಎಂಬ ಬಗ್ಗೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗೆ ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ ‘ಎ’ ವರ್ಗದ ದೇವಸ್ಥಾನವಾಗಿದ್ದು, ರಾಜ್ಯದಲ್ಲಿ 2ನೇ ಶ್ರೀಮಂತ ದೇವಸ್ಥಾನ ಎನಿಸಿಕೊಂಡಿದೆ. 2023-24ರಲ್ಲಿ ದೇವಸ್ಥಾನದ ಆದಾಯ 68,23,06,285.09, ಆಗಿದ್ದು, ವೆಚ್ಚ ರೂ.41,63,93,569.28 ಹಾಗೂ 2. 26,59,12,715.81 ಆಗಿದೆ ಎಂದು ಬಾಬು ಶೆಟ್ಟಿ ತಿಳಿಸಿದ್ದಾರೆ.
2024-25 ರಲ್ಲಿ ಆದಾಯ ರೂ. 71,93,37,864.66 ಆಗಿದ್ದರೆ ವೆಚ್ಚ 40,58,19,652.63 ರೂ.ಉಳಿತಾಯ 31,35,18,212.03 ರೂ. ಇದೆ. ಕಳೆದ ಎರಡು ವರ್ಷಗಳಲ್ಲಿ ದೇವಳದ ಒಟ್ಟು ವಾರ್ಷಿಕ ಉಳಿತಾಯ ರೂ. 57,94,30,927.84 ಆಗಿದ್ದು ದೇವಸ್ಥಾನದ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನಿರಖು ಠೇವಣಿಯಲ್ಲಿ ತೊಡಗಿಸಲಾಗಿದೆ. ಸದ್ಯ ದೇವಸ್ಥಾನದ ಹೆಸರಿನಲ್ಲಿರುವ ನಿರಖು ಠೇವಣಿಯಲ್ಲಿ ತೊಡಗಿಸಿದ ಮೊತ್ತ 212 ಕೋಟಿ ರೂ. ಆಗಿದೆ ಎಂದವರು ವಿವರಿಸಿದ್ದಾರೆ.
ದೇವಸ್ಥಾನದ ಬಗ್ಗೆ ಆಧಾರವಿಲ್ಲದೆ ಸಾಮಾಜಿಕ ಜಾಲ ತಾಣಗಳಲ್ಲಿ ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು, ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತಿರುವುದಾಗಿ ಕೆ.ಬಾಬು ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.